ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯ -ಡಾ.ಕೆ.ಸುಧಾಕರ್

ಬೆಂಗಳೂರು: ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮರ್ಪಕ ಆರೋಗ್ಯ ಸೇವೆ ನೀಡುವ ಗುರಿಯುಳ್ಳ ಆಯುಷ್ಮಾನ್ ಭಾರತ ಡಿಜಿಟಲ್ ಮಿಶನ್ (ಎಬಿಡಿಎಂ) ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಉಪಕ್ರಮವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ನಾಸ್ಕಾಂ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಸಮಾವೇಶದಲ್ಲಿ ಮಾತನಾಡಿದರು.

ಬೆಂಗಳೂರೊಂದರಲ್ಲೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ 7,500 ನವೋದ್ಯಮಗಳಿವೆ. ತಂತ್ರಜ್ಞಾನ ಬಳಕೆಯಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದ ಆರೋಗ್ಯ ಸೇವೆಗಳ ಮಾಹಿತಿ, ಮಾನವ ಸಂಪನ್ಮೂಲ ವ್ಯವಸ್ಥೆ ಸಹಿತ ಆರೋಗ್ಯ ವಲಯದ ಸಮಗ್ರ ಮಾಹಿತಿಗಳನ್ನು ಕ್ರೋಡೀಕರಿಸಲಾಗುತ್ತಿದೆ.

ಆ ಮೂಲಕ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಆಂಬುಲೆನ್ಸ್ ಸೇವೆಯನ್ನು ಇನ್ನೊಂದು ತಿಂಗಳಲ್ಲಿ ಸಮಗ್ರವಾಗಿ ಬದಲಾಯಿಸಲಾಗುತ್ತಿದೆ.

ರೋಗಿಗಳನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂಬ ಮಾಹಿತಿಯನ್ನು ಆಂಬುಲೆನ್ಸ್ ಚಾಲಕರಿಗೆ ಟೆಲಿಕಾಲ್ ಮೂಲಕ  ಒದಗಿಸಲಾಗುವುದು. ಇದರಿಂದ ವಿಂಳಂಬವಿಲ್ಲದೆ ಎಂದು ತಿಳಿಸಿದರು. 

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯಡಿ ಪ್ರತಿಯೊಬ್ಬ ಅರ್ಹರಿಗೂ ಒಂದು ಗುರುತಿನ ಸಂಖ್ಯೆ ನೀಡಲಾಗುವುದು. ಜತೆಗೆ, ಸರ್ಜನ್ ಮಟ್ಟದ ಪರಿಣಿತ ವೈದ್ಯರಿಂದ ಹಿಡಿದು ಸಾಮಾನ್ಯ ವೈದ್ಯರವರೆಗೂ ಸಮಗ್ರ ದತ್ತಾಂಶ ಸಂಗ್ರಹಿಸಲಾಗುವುದು.

ಇದರಿಂದ ಆರೋಗ್ಯ ಕ್ಷೇತ್ರವನ್ನು ಕಾಡುತ್ತಿರುವ ನಕಲಿ ವೈದ್ಯರ ಸಮಸ್ಯೆಗೆ ತೆರೆ ಬೀಳಲಿದೆ ಎಂದು ಸಚಿವರು ಹೇಳಿದರು.

ಟೆಲಿ ಮೆಡಿಸಿನ್, ಟೆಲಿ ರೇಡಿಯಾಲಜಿ, ಇ-ಸಂಜೀವಿನಿ, ಟೆಲಿ-ಸಮಾಲೋಚನೆ ಮುಂತಾದ ವ್ಯವಸ್ಥೆಗಳ ಮೂಲಕ ರಾಜ್ಯದ ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯವು ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದೆ.

ಕೋವಿಡ್ ಲಸಿಕೆ ಪಡೆದವರಿಗೆ ಭಾರತದಲ್ಲಿ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಆ ಮೂಲಕ  ಭಾರತವು ಇತರೆ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಸುಧಾಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಸ್ಕಾಂ ಮುಖ್ಯಸ್ಥೆ ದೇಬಜಾನಿ ಘೋಷ್,  ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್.ಎಸ್. ಶರ್ಮಾ, ಉಪಾಧ್ಯಕ್ಷ ಡಾ.ಪ್ರವೀಣ್  ಖೇತಂ,  ರಾಜ್ಯ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಆಯಕ್ತರಾದ ರಂದೀಪ್ ಪಾಲ್ಗೊಂಡಿದ್ದರು.