ಬೆಂಗಳೂರು: ವಿಧಾನಪರಿಷತ್‍ಗೆ ನಡೆಯುವ ದ್ವೈ ವಾರ್ಷಿಕ ಚುನಾವಣೆಯ ಮತದಾನ ಸೋಮವಾರ ಶಾಂತಿಯುತವಾಗಿ ನಡೆಯಿತು.
ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯುವ್ಯ ಶಿಕ್ಷಕ ಕ್ಷೇತ್ರದಿಂದ ವಿಧಾನಪರಿಷತ್‍ಗೆ ದ್ವೈ ವಾರ್ಷಿಕ ಚುನಾವಣೆ ನಡೆಯಿತು.
ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಯಿತು. ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತದಾರರು ಮತದಾನ ಮಾಡಿದರು.
ವಿಧಾನಪರಿಷತ್‍ನ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತದಾನ ಮೂಲಕ ನಿರ್ಧರಿಸಿದ್ದಾರೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾನ ನಡೆಯಿತು.
ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣಾ ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ ಬಾಬಣ್ಣ ಹುಕ್ಕೇರಿ, ಜೆಡಿಎಸ್‍ನಿಂದ ಚಂದ್ರಶೇಖರ ಏಸಪ್ಪ ಲೋಣಿ ಸೇರಿದಂತೆ 12 ಅಭ್ಯರ್ಥಿಗಳು ಸ್ಪರ್ಧೆಸಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನಿಂದ ಬಸವರಾಜ ಗುರಿಕಾರ, ಜೆಡಿಎಸ್‍ನಿಂದ ಶ್ರೀಶೈಲ ಗಡದಿಮ್ಮಿ ಸೇರಿದಂತೆ 7 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

