ಮೇಕೆದಾಟು ವಿಚಾರದಲ್ಲಿ ಮತ್ತೆ ಖ್ಯಾತೆ ತೆಗೆದ ತಮಿಳುನಾಡು; ಪಿಎಂಗೆ ಪತ್ರ

ಚೆನ್ನೈ: ಮೇಕೆದಾಟು ವಿಚಾರವಾಗಿ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದ್ದು ಈ ಸಂಬಂಧ ಪ್ರಧಾನಿ ನರೇಂದ್ರಮೋದಿ ಅವರಿಗೆ‌ ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪತ್ರ ಬರೆದಿದ್ದಾರೆ.

ಜೂನ್ 17ರಂದು ನಡೆಯಲಿರುವ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಚರ್ಚಿಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಬೇಕೆಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ

ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಕಾರ್ಯ ಚಟುವಟಿಕೆಯ ವ್ಯಾಪ್ತಿಯು ಸುಪ್ರೀಂಕೋರ್ಟ್ ನಿರ್ದೆಶನಗಳನ್ನು ಪಾಲಿಸುವ ಮಿತಿಯನ್ನು ಮಾತ್ರ ಹೊಂದಿದೆ. ಬೇರೆ ವಿಷಯಗಳನ್ನು ಪ್ರಾಧಿಕಾರ ಪರಿಗಣಿಸುವಂತಿಲ್ಲ.

ಮೇಕೆದಾಟು ಸಂಬಂಧ ತಮಿಳುನಾಡಿನ ಹಲವು ಅರ್ಜಿಗಳು ವಿಚಾರಣೆ ಹಂತದಲ್ಲಿದೆ. ಹಾಗಾಗಿ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಈ ವಿಷಯದ ಬಗ್ಗೆ ಯಾವುದೇ ಚರ್ಚೆ ಮಾಡದಂತೆ ಪ್ರಾಧಿಕಾರಕ್ಕೆ ಸಲಹೆ ನೀಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚನೆ ನೀಡಬೇಕೆಂದು ಸ್ಟಾಲಿನ್  ಕೋರಿದ್ದಾರೆ.