ಬೆಂಗಳೂರು: ಮೇಕೆದಾಟು ವಿಚಾರವಾಗಿ ಜೂ.17ರಂದು ಕರೆದಿರುವ ಸಭೆಯನ್ನು ನಡೆಸದಂತೆ ತಮಿಳುನಾಡು ಸಿಎಂ ಪ್ರಧಾನಿಗೆ ಬರೆದಿರುವ ಪತ್ರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಒಕ್ಕೂಟ ವ್ಯವಸ್ಥೆಯ ಮೇಲೆ ತಮಿಳುನಾಡು ಸರ್ಕಾರ ದಬ್ಬಾಳಿಕೆ ನಡೆಸಲು ಹೊರಟಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಂಡರೆ ಅವರಿಗೇನು ಸಮಸ್ಯೆ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಕುರಿತು ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಮೇಕೆದಾಟು ಯೋಜನೆ ಸಭೆಯನ್ನು ನಡೆಸದಂತೆ ಪತ್ರ ಬರೆದಿರುವುದು ಸರಿಯಲ್ಲ. ಇದಕ್ಕೆ ಕಾನೂನಿನಲ್ಲಿ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.
ಈ ಹಿಂದೆ 15 ಸಭೆಗಳು ನಡೆದಾಗ ತಮಿಳುನಾಡು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈಗೇಕೆ ತಕರಾರು ಮಾಡುತ್ತಿದೆ ಎಂದು ಸಿಎಂ ಪ್ರಶ್ನಿಸಿದರು.
ನಾವೇನು ತಮಿಳುನಾಡು ಪಾಲಿನ ನೀರನ್ನು ಬಳಸಿಕೊಂಡು ಯೋಜನೆ ಪ್ರಾರಂಭಿಸುತ್ತಿಲ್ಲ. ನ್ಯಾಯಾಧೀಕರಣ ಕರ್ನಾಟಕಕ್ಕೆ ನಿಗದಿಪಡಿಸಿರುವ ನೀರನ್ನೇ ಬಳಸಿಕೊಂಡು ಯೋಜನೆ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಈ ಹಿಂದೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯೇ ವಿಸ್ತೃತ ಯೋಜನಾ ವರದಿ(ಡಿಪಿಆರ್)ಯನ್ನು ಸಿದ್ಧಪಡಿಸಲು ಸೂಚಿಸಿತ್ತು.
ಅದರಂತೆ ನಮ್ಮ ಸರ್ಕಾರ ಡಿಪಿಆರ್ ಸಿದ್ದಪಡಿಸಿ ಒಪ್ಪಿಗೆ ಪಡೆದುಕೊಂಡಿದೆ. ಏಕಾಏಕಿ ಸಭೆಯನ್ನೇ ನಡೆಸದಂತೆ ಒತ್ತಡ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡು ಸರ್ಕಾರ ಕಾವೇರಿಯ ಪ್ರತಿಯೊಂದು ವಿಷಯದಲ್ಲೂ ಕ್ಯಾತೆ ತೆಗೆಯುವುದು ಸಾಮಾನ್ಯವಾಗಿಬಿಟ್ಟಿದೆ. ಅವರಿಗೆ ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುವುದು ಹುಟ್ಟುಗುಣ. ಇದು ಕೂಡ ಒಂದು ಪೊಲಿಟಿಕಲ್ ಸ್ಟಂಟ್ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
17ರಂದು ನಡೆಯುವ ಸಭೆಗೆ ರಾಜ್ಯದ ಪರವಾಗಿ ಅಧಿಕಾರಿಗಳು ಭಾಗವಹಿಸುತ್ತಾರೆ. ಕಾವೇರಿ ಜಲಾನಯನದ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳೂ ಭಾಗಿಯಾಗಲಿದ್ದಾರೆ ಎಂದು ಸಿಎಂ ಹೇಳಿದರು.

