ಹಾಸನ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಾಗ ಹುಯಿಲೆಬ್ಬಿಸಿದ ವಿಛಿದ್ರ ಶಕ್ತಿಗಳೇ ಈಗಲೂ ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಅನಗತ್ಯವಾಗಿ ಗಲಾಟೆ ಮಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಂಥನ ಬಳಗವು ಏರ್ಪಡಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆ- ಒಂದು ವಿಶ್ಲೇಷಣೆ ಸಂವಾದದಲ್ಲಿ ಅವರು ಮಾತನಾಡಿದರು.
ಪಠ್ಯವನ್ನು ಮರುಪರಿಷ್ಕರಣೆ ಮಾಡಿದ ಕೂಡಲೇ ಅದನ್ನು ಸಾರ್ವಜನಿಕವಾಗಿ ಮುಕ್ತಗೊಳಿಸಲಾಗಿತ್ತು. ಈಗ ಕೂಗೆಬ್ಬಿಸುತ್ತಿರುವವರು ಆಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಎನ್ಇಪಿ ಘೋಷಿಸಿದಾಗ ಕೆಲವು ವಿಧ್ವಂಸಕ ಮನೋಭಾವದ ಗುಂಪುಗಳು, ಇದು ದಲಿತರಿಗೆ ವಿರುದ್ಧವಾಗಿದೆ, ಅಲ್ಪಸಂಖ್ಯಾತರಿಗೆ ವಿರುದ್ಧವಾಗಿದೆ ಎಂದೆಲ್ಲ ಪುಕಾರು ಹಬ್ಬಿಸಿದರು.
ಈಗ ಅಂಥವೇ ಶಕ್ತಿಗಳು ಜಾತಿ, ಸಮುದಾಯ, ಭಾಷೆ ಇತ್ಯಾದಿಗಳ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿವೆ. ಎಲ್ಲಕ್ಕಿಂತ ದೇಶ ಮೊದಲು ಎನ್ನುವ ಸತ್ಯವನ್ನು ಇವರೆಲ್ಲ ಅರಿಯಬೇಕು ಎಂದು ಅಶ್ವಥ್ ನಾರಾಯಣ ಹೇಳಿದರು.
ಪಠ್ಯ ಮರು ಪರಿಷ್ಕರಣೆಯಲ್ಲಿ ಅಂಬೇಡ್ಕರ್ ಅವರಿಗಾಗಲಿ, ಇತರ ಮಹಾನ್ ವ್ಯಕ್ತಿಗಳಿಗಾಗಲಿ ಯಾವುದೇ ಅಪಮಾನವಾಗಿಲ್ಲ ಎಂದು ತಿಳಿಸಿದರು.

