ಬಿಜೆಪಿ ವಿರುದ್ಧ ಎಚ್ಡಿ ಕೆ ಕಿಡಿ

ಬೆಂಗಳೂರು: ಬಿಜೆಪಿ ಸರ್ಕಾರ ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಗೆ ಷಡ್ಯಂತ್ರ ನಡೆಸಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.

ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ ಸೇವೆಗಳು ಲಭ್ಯವಾಗಲಿ ಎಂಬ ಉದ್ದೇಶದಿಂದ ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದೆ ಎಂದು ‌ಹೇಳಿದ್ದಾರೆ.

ಬಿಜೆಪಿ ಅಧಿಕಾರ ಪಿಪಾಸು. ಅನ್ಯಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟ ಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಡುವರೋ ಎಂಬ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ ಎಂದು ‌ಆರೋಪಿಸಿದ್ದಾರೆ.

ಕೋರ್ಟ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರ್ಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕವಾಡಿದೆ ಎಂದು ಎಚ್ ಡಿ ಕೆ ಟ್ವೀಟ್ ನಲ್ಲಿ  ಕಿಡಿಕಾರಿದ್ದಾರೆ.

ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ ಅಧಿಕಾರದ ವಿಕೃತಿ ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.

ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ ಎಂದು ಆರೋಪಿಸಿದ್ದಾರೆ.

ಐತಿಹಾಸಿಕ ವಾರ್ಡುಗಳ ಹೆಸರುಗಳನ್ನು ಬದಲಿಸಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಚರಿತ್ರೆಯ ಕುರುಹುಗಳನ್ನು ಅಳಿಸಿ ಹಾಕಿ ಪಠ್ಯಕ್ಕೆ ಅಪಚಾರ ಎಸಗಿದಂತೆ ನಾಡಪ್ರಭುಗಳು ಮತ್ತು ಮೈಸೂರು ಒಡೆಯರರ ಘನ ಕೀರ್ತಿಗೆ ಚ್ಯುತಿ ತರುವ ಹುನ್ನಾರ ಇದು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.