ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಮರುನಾಮಕರಣ ಮಾಡಲಾಗಿದೆ.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವಿಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಎಂದು ಕರೆಯಲ್ಪಡುತ್ತಿದ್ದ ಇಲಾಖೆಯನ್ನು ಇನ್ನು ಮುಂದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯನ್ನಾಗಿ ಮರು ನಾಮಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ 12ನೇ ತರಗತಿವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿಯೂ ಸಹ ಈ ಅಂಶವನ್ನು ಪುನರುಚ್ಛರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ ಪದನಾಮವನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುವುದು ಸೂಕ್ತ ಎಂದು ವಿವಿಧ ಹಂತದ ಚರ್ಚೆಯಲ್ಲಿ ತಜ್ಜರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಹೆಚ್ಚಿನ ರಾಜ್ಯಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಎಂಬ ಪದನಾಮ ರೂಢಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿಯೂ ಸಹ ಇದೇ ಮಾದರಿಯನ್ನು ಅಳವಡಿಸಲು ನಿರ್ಧರಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

