ಬೆಂಗಳೂರು: ಅಗ್ನಿಪತ್ ಯೋಜನೆ ವಿರೋಧಿಸಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಬೇಕು ಎಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,
ಯುವಕರಿಗೆ ದೊಡ್ಡ ಅನ್ಯಾಯವಾಗುತ್ತಿದ್ದು, ಪ್ರತಿಭಟನೆ ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಿ ಈ ಅನ್ಯಾಯ ವಿಚಾರವನ್ನು ಜನರಿಗೆ ಮುಟ್ಟಿಸಬೇಕಿದೆ ಎಂದು ಹೇಳಿದರು.
ಸರ್ಕಾರ ಏನಾದರೂ ಹೇಳಲಿ ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಮಕ್ಕಳು ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಬೇರೆಯವರಿಗೆ ಸೆಕ್ಯುರಿಟಿ ಗಾರ್ಡ್ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಬೇಕಿದ್ದರೆ ಬಿಜೆಪಿ ನಾಯಕರ ಮಕ್ಕಳು ಆಗ್ನಿಪತ್ ಮೂಲಕ ಸೇನೆ ಸೇರಲಿ. ಅವರ ಮಕ್ಕಳು ಮಾತ್ರ ವೈದ್ಯರು, ಇಂಜಿನಿಯರ್, ಪ್ರೊಫೆಸರ್ ಆಗಬೇಕು, ಬಡವರ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಆಗಬೇಕಾ ಎಂದು ಡಿಕೆಶಿ ಪ್ರಶ್ನಿಸಿದರು. ಅಸಮಾಧಾನಿತರ ಸಭೆ ಶಿಸ್ತು ಉಲ್ಲಂಘನೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಆ ವಿಚಾರವಾಗಿ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ ಎಂದು ಶಿವಕುಮಾರ್ ತಿಳಿಸಿದರು.

