ಮುಂಬೈ: ಸಧ್ಯಕ್ಕೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿ ರೆಬೆಲ್ ಆಗಿದ್ದ 15 ಶಾಸಕರು ಅನರ್ಹತೆಯ ತೂಗಕತ್ತಿಯಿಂದ ಪಾರಾಗಿದ್ದಾರೆ.
ಇದರಿಂದ ಮಹಾರಾಷ್ಟ್ರ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಹಾಗೂ ಮುಖ್ಯ ಮಂತ್ರಿ ಉದ್ದವ್ ಠಾಕ್ರೆಗೆ ಹಿನ್ನಡೆಯಾಗಿದ್ದು,ರೆಬೆಲ್ ಶಾಸಕರ ನಾಯಕ ಏಕನಾಥ್ ಶಿಂದೆಗೆ ಆರಂಭಿಕ ಮುನ್ನಡೆ ಸಿಕ್ಕಂತಾಗಿದೆ.
ರೆಬೆಲ್ ಶಾಸಕರ ಅನರ್ಹತೆಗೆ ಡೆಪ್ಯುಟಿ ಸ್ಪೀಕರ್ ನೀಡಿರುವ ನೋಟೀಸ್,ಅವಿಶ್ವಾಸ ನಿಲುವಳಿ ಸೂಚನೆ ಹಾಗೂ ಅಜಯ್ ಚೌಧುರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿರುವ ಮುಖ್ಯ ಮಂತ್ರಿ ಉದ್ದವ್ ಠಾಕ್ರೆ ಅವರ ಕ್ರಮಗಳನ್ನು ಪ್ರಶ್ನಿಸಿ ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂದೆ ಅವರ ಬಣ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ಈ ಮನವಿ ಕುರಿತು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ11 ಕ್ಕೆ ಮುಂದೂಡಿದೆ.
ಹಾಗಾಗಿ ರೆಬೆಲ್ ಶಾಸಕರು ಸಧ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೂ ನೋಟೀಸ್ ನೀಡಿದ್ದು ಐದು ದಿನದೊಳಗೆ ಇದಕ್ಕೆ ಉತ್ತರ ಕೊಡುವಂತೆ ಸೂಚಿಸಿದೆ.
ಅಲ್ಲದೆ ಶಾಸಕರ ಅನರ್ಹತೆ ಸಂಬಂಧ ವಿಧಾನಸಭೆ ಅಧಿವೇಶನ ಕೂಡಾ ಕರೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇತ್ತ ಸಿಎಂ ಉದ್ದವ್ ಠಾಕ್ರೆ ಬಣ ಕೂಡಾ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಕಾನೂನು ಸಮರ ದೀರ್ಘವಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

