ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವುದು ಖಚಿತವಾಗಿದೆ.

ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈ ಕುರಿತು ಸುಳಿವು ನೀಡಿದ್ದಾರೆ.

ಜೆಡಿಎಸ್ ಬೆಂಬಲ ನೀಡಲಿರುವುದರಿಂದ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗೆಲುವು ಮತ್ತಷ್ಟು ಸುಲಭವಾಗಿದೆ.

ಈ ಸಂಬಂಧ  ಹೆಚ್.ಡಿ.ಕೆ  ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ, ದ್ರೌಪದಿ ಮುರ್ಮು ಅವರು ದೇವೇಗೌಡರಿಗೆ ಎರಡು ಬಾರಿ ಕರೆ ಮಾಡಿ ಬೆಂಬಲ ಕೇಳಿದ್ದಾರೆ ಎಂದು ತಿಳಿಸಿದರು.

ಖುದ್ದು ಬೆಂಗಳೂರಿಗೆ ಬಂದು ದೇವೇಗೌಡರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ ನಾನು ಅವರು ಬೆಂಗಳೂರಿಗೆ ಬರುವುದು ಬೇಡವೆಂದು ಹೇಳಿದ್ದೇನೆ ಎಂದರು.

ದ್ರೌಪದಿ ಮುರ್ಮು ಅವರ ಹಿನ್ನೆಲೆಯನ್ನು ನಾವು ಗಮನಿಸಿದ್ದೇವೆ. ಅವರ ಕಷ್ಟಗಳ ಮಾಹಿತಿಯೂ ಇದೆ. ಈಗಾಗಲೇ ಎನ್.ಡಿ.ಎ ಅಭ್ಯರ್ಥಿಗೆ ಬಹುಮತದ ಸಂಖ್ಯೆ ಇದೆ.ಹಾಗಾಗಿ ಅವರು ಗೆದ್ದಂತೆಯೇ.

ಬಹುಮತ ಇದ್ದರೂ ಅವರು ನಮ್ಮ ಬಳಿ ಬೆಂಬಲ ಕೇಳಿದ್ದಾರೆ. ಅದು ಅವರ ಒಳ್ಳೆ ಗುಣ  ಆದ್ದರಿಂದ ನಾವು ಅವರನ್ನೇ ಬೆಂಬಲಿಸುತ್ತೇವೆ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆಯಲ್ಲಿ ಎ ಟೀಂ,ಬಿ ಟೀಂ ಅನ್ನೋ ಆರೋಪಗಳು ಬರುವುದಿಲ್ಲ. ಮತ ಹಾಕಿದರೆ ಯಾರೂ ಆರೋಪ ಮಾಡಲು ಆಗುವುದಿಲ್ಲ. ಹೀಗಾಗಿ ಇಬ್ಬರು ಅಭ್ಯರ್ಥಿಗಳ ಹಿನ್ನಲೆ ನೋಡಿ ಮತ ಹಾಕುತ್ತೇವೆ ಎಂದು ತಿಳಿಸಿದರು.