ಬೆಂಗಳೂರು: 2008 ರಿಂದ 2013 ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೆಸರಲ್ಲಿ ಹಣದ ಲೂಟಿ ಮಾಡಿರುವ ಬಗ್ಗೆ ಜನತೆಯ ಮುಂದೆ 15 ವಾಹನ ಮೂಲಕ ಮಾಹಿತಿ ನೀಡುತ್ತೇವೆ ಎಂದು ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ದಿಂದ ಜುಲೈ17ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಜನತಾಮಿತ್ರ ಜನ ಸಂಪರ್ಕ ಕಾರ್ಯಕ್ರಮಕ್ಕೆ ಜೆಪಿ ಭವನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರೊಂದಿಗೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.
ಜನತಾಮಿತ್ರ ಕಾರ್ಯಕ್ರಮದ ವಾಹನಗಳು ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರತಿಯೊಂದು ವಾರ್ಡ್ ಗಳಿಗೂ ಹೋಗಲಿವೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು ಎಂದು ಮನವಿ ಮಾಡಿದರು.
ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆಮನೆಗೂ ಮುಟ್ಟಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ದೇಶ ಹಾಗೂ ರಾಜ್ಯದಲ್ಲಿ ಇರುವ ಪರಿಸ್ಥಿತಿ. ಬೆಂಗಳೂರಿಗೆ ಯಾರು, ಯಾವ ಕೊಡುಗೆ ಕೊಟ್ಟಿದ್ದಾರೆ ಅನ್ನುವ ದಾಖಲೆ ಕೊಡಲಾಗುತ್ತದೆ.
ಆ ವಾಹನಗಳು ಮುಂದಿನ ಚುನಾವಣೆ ವರೆಗೆ ನಗರದಾದ್ಯಂತ ಸಂಚಾರ ಮಾಡಲಿವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಆರೂವರೆ ಕೋಟಿ ಜನರಿಗೂ ಸಹಕಾರ ಕೊಡಿ ಎಂದು ಕೇಳುತ್ತೇವೆ. ಜನ ಈಗಾಗಲೇ ನೊಂದಿದ್ದಾರೆ. ಅವರ ಬದುಕಿಗೆ ನಾವು ಸಾಂತ್ವಾನ ಹೇಳಿ ಸಹಾಯ ಮಾಡಬೇಕಿದೆ ಎಂದು ಅವರು ಹೇಳಿದರು.

