ಕನ್ನಯ್ಯ ಹತ್ಯೆ ಆರೋಪಿಗಳ ಬಂಧನದಿಂದ ಹೊರಬೀಳುತ್ತಿವೆ ಸ್ಪೋಟಕ ಮಾಹಿತಿ

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್‍ರನ್ನು ಹತ್ಯೆ ಮಾಡಿದ ಆರೋಪಿಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿವೆ.

ಈ‌ ಆರೋಪಿಗಳಿಗೆ ಬೆಂಗಾವಲಾಗಿ ಇನ್ನಿಬ್ಬರು ಅಂಗಡಿಯ ಹೊರಗೆ ಕಾವಲು ಕಾಯುತ್ತಿದ್ದರು‌ ಎಂಬುದು ಗೊತ್ತಾಗಿದೆ.

ಇದರಿಂದಾಗಿ ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಪಾಕಿಸ್ತಾನ ಮೂಲದ ಉಗ್ರರು, ಭಾರತದಲ್ಲಿ ಇನ್ನಷ್ಟು ದೊಡ್ದದಾಗಿ ಏನಾದರೂ ಮಾಡುವಂತೆ ಪ್ರಚೋದನೆ ನೀಡಿದ್ದಾರೆಂದು ಮಾಹಿತಿ ಗೊತ್ತಾಗಿದೆ.

ರಾಷ್ಟ್ರೀಯ ತನಿಖಾದಳ ಪ್ರಕರಣದ ತನಿಖೆ ಆರಂಭಿಸಿದ್ದು, ರಾಜಸ್ಥಾನದ ಅಜ್ಮೀರ್ ಜೈಲಿನಲ್ಲಿರುವ ಆರೋಪಿಗಳಾದ ಮೊಹಮದ್ ರಿಯಾಜ್ ಮತ್ತು ಗೌಸ್ ಮೊಹಮದ್‍ರನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ತನ್ನ ವಶಕ್ಕೆ ತೆಗೆದುಕೊಂಡಿದೆ.

ಪಾಕಿಸ್ತಾನದ ಸಲ್ಮಾನ್ ಹೈದರ್ ಮತ್ತು ಅಬು ಇಬ್ರಾಹಿಂ ಎಂಬ ಉಗ್ರರೊಂದಿಗೆ ಕನ್ಹಯ್ಯ ಲಾಲ್ ಹತ್ಯೆಯ ಆರೋಪಿಗಳು ಸಂಪರ್ಕದಲ್ಲಿರೆಂಬುದೂ ಬೆಳಕಿಗೆ ಬಂದಿದೆ.

ಕನ್ಹಯ್ಯಲಾಲ್ ಹತ್ಯೆ ಮಾಡಿದ ಬಳಿಕ ಆರೋಪಿಗಳಿಗೆ ಆರ್‍ಡಿಎಕ್ಸ್ ತಲುವುದರಲ್ಲಿತ್ತು. ಅದನ್ನು ಬಳಸಿ ದೇಶದಲ್ಲಿ ಭಾರೀ ಸ್ಫೋಟ ನಡೆಸಲು ಆರೋಪಿಗಳು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಆದರೆ ಅಷ್ಟರಲ್ಲಿ ಆರೋಪಿಗಳು ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಸಿಕ್ಕಿಬಿದ್ದಿದ್ದಾರೆ.