ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಮೂರು ತಿಂಗಳು ಬಾಕಿಯಿದ್ದು,ಇದರ ಪೂರ್ವಭಾವಿ ಚಟುವಟಿಕೆಗಳು ಗರಿಗೆದರಿವೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಅರಮನೆ ಆವರಣಕ್ಕಷ್ಟೇ ಮೆರವಣಿಗೆ ಸೀಮಿತವಾಗಿತ್ತು.
ಆದರೆ ಈ ಬಾರಿ ಅತ್ಯಂತ ವೈಭವಯುತವಾಗಿ ದಸರಾ ಆಚರಿಸಲಾಗುತ್ತಿದೆ.
ಜಂಬೂಸವಾರಿಯಲ್ಲಿ ಭಾಗವಹಿಸಬೇಕಾದ ಆನೆಗಳ ಆಯ್ಕೆ ಪ್ರಕ್ರಿಯೆಗೆ ಮೊದಲು ಚಾಲನೆ ಸಿಗಲಿದೆ.
ಆಗಸ್ಟ್ ಮೊದಲ ವಾರದಲ್ಲಿ ಸಾಂಪ್ರದಾಯಿಕವಾಗಿ ಗಜಪಯಣ ಆರಂಭವಾಗಬೇಕಿರುವ ಹಿನ್ನಲೆಯಲ್ಲಿ ಜು.15ರ ನಂತರ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿನ ಆನೆ ಶಿಬಿರಗಳಿಗೆ ತಜ್ಞರ ತಂಡ ಭೇಟಿ ನೀಡಿ, 15 ಆನೆಗಳ ಪಟ್ಟಿ ಮಾಡಲಿದ್ದಾರೆ.
ಈಗಾಗಲೇ ಜಂಬೂಸವಾರಿ ಆನೆಗಳಿಗೆ ಗುಣಮಟ್ಟದ ಆಹಾರ ಪೂರೈಕೆಗೂ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಕಳೆದ ವರ್ಷ ಸರಳ ದಸರೆಯಲ್ಲಿ ಕೇವಲ 8 ಆನೆಗಳಷ್ಟೇ ಭಾಗವಹಿಸಿದ್ದವು. ಆದರೆ ಈ ಬಾರಿ ಅಂಬಾರಿ ಆನೆ ಅಭಿಮನ್ಯು ಜೊತೆ ಗೋಪಾಲ ಸ್ವಾಮಿ, ಧನಂಜಯ, ಅಶ್ವತ್ಥಾಮ, ವಿಕ್ರಮ, ಅರ್ಜುನ ಸೇರಿದಂತೆ 15 ಆನೆಗಳು ಆಗಮಿಸಲಿವೆ.
ಸೆ. 26ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬರ್ 5ರ ವಿಜಯ ದಶಮಿಯಂದು ಜಂಬೂಸವಾರಿ ನಡೆಯಲಿದೆ.

