ಬೆಂಗಳೂರು: ಒಂದು ತಿಂಗಳೊಳಗೆ ಸೋರುತ್ತಿರುವ ಶಾಲೆಗಳನ್ನು ದುರಸ್ತಿ ಪಡಿಸದಿದ್ದರೆ ಸದನದ ಒಳಗೆ, ಹೊರಗೆ ಶಿಕ್ಷಣ ಸಚಿವರು ಹೋರಾಟ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಭವ್ಯಭಾರತವನ್ನು ಬೆಳಗಲು ತಕ್ಷಣ ಸರ್ಕಾರ ಕ್ರಮ ವಹಿಸಬೇಕು. ಅಧಿಕಾರಿಗಳನ್ನು ಶಾಲೆಗಳಿಗೆ ಅಟ್ಟಿ ರಿಪೇರಿ ಕೆಲಸ ಮಾಡಿಸಿ ಮೂಲಸೌಕರ್ಯ ಒದಗಿಸಬೇಕು ಎಂದು ಅವರು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ಮಾಳಿಗೆಗಳು ಸೋರುತ್ತಿವೆ. ಗೋಡೆಗಳು ಬಣ್ಣಗೆಟ್ಟಿವೆ. ಕಿಟಕಿ, ಬಾಗಿಲು ಹಾಳಾಗಿವೆ. ಕುಡಿಯಲು ನೀರಿಲ್ಲ. ಮಕ್ಕಳಿಗೆ ಶೌಚಾಲಯವೂ ಇಲ್ಲ. ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಇದು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ದೃಶ್ಯವೈಭವ ಎಂದು ಆರೋಪಿಸಿದ್ದಾರೆ.
ಬಿಜೆಪಿ ಬಣ್ಣಗೇಡು ವರಸೆಗೆ ಇದು ತಾಜಾ ಉದಾಹರಣೆ. ಹೇಳುವುದು ಒಂದು, ಮಾಡುವುದು ಇನ್ನೊಂದು.
ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ಮಕ್ಕಳ ಕಲಿಕೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ ಎಂದು ಜರಿದಿದ್ದಾರೆ.
ಪಠ್ಯಕ್ಕೆ ಕೇಸರಿ ಬಳಿದು ಕತ್ತರಿ ಹಾಕುವ ಅಕ್ಷರದ್ರೋಹಿ ಬಿಜೆಪಿ ಸರ್ಕಾರಕ್ಕೆ ಬಣ್ಣಗೆಟ್ಟ ಶಾಲೆಗಳ ಗೋಡೆಗಳೇ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 75,675 ಶಾಲೆಯ ಕೊಠಡಿಗಳು ಶಿಥಿಲವಾಗಿವೆ. ಇಲ್ಲಿ ಶಿಥಿಲ ಆಗಿರುವುದು ಕರ್ನಾಟಕದ ಹೆಮ್ಮೆ ಎಂದು ಎಚ್ ಡಿ ಕೆ ಟೀಕಿಸಿದ್ದಾರೆ.
ಪಠ್ಯದ ಕತ್ತರಿಗೆ ಇರುವಷ್ಟು ಆತುರ ಶಾಲೆ ಕೊಠಡಿಗಳ ರಿಪೇರಿಗೆ ಯಾಕಿಲ್ಲ ಇಲ್ಲಿ ಶೇ.40 ರಷ್ಟು ಕಮೀಷನ್ ವ್ಯವಹಾರ ಕುದುರಲಿಲ್ಲವೇ
ಭಾರತವನ್ನು ವಿಶ್ವಗುರು ಮಾಡುವುದು ಎಂದರೆ ಹೀಗೇನಾ ಹೇಳಿ ಮಾನ್ಯ ಶಿಕ್ಷಣ ಸಚಿವರೇ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಮೀರಿದೆ. ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಮಾಡಿದ್ದೇನು ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುತ್ತೀರಿ, ಪಠ್ಯ ಪರಿಷ್ಕರಣೆ ಮಾಡಿದ್ದೀರಿ.
ಶಿಕ್ಷಣ ಸಚಿವ ನಾಗೇಶ್ ಅವರೇ, ಪಠ್ಯಕ್ಕೆ ಆಪರೇಷನ್ ಕಮಲದ ಒಂದು ಅಧ್ಯಾಯವನ್ನೂ ಸೇರಿಸಬೇಕಿತ್ತು ಎಂದು ಕುಮಾರಸ್ವಾಮಿ ವ್ಯಂಗ್ಯತೆಯ ಛಾಟಿ ಬೀಸಿದ್ದಾರೆ.

