ಸಿದ್ದು ‌ಬಣಕ್ಕೆ ಡಿಕೆಶಿ ಟಾಂಗ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ಗೊಂಡಿದ್ದಾರೆ.

ಭಾನುವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡುವಾಗ‌ ಪ್ರತಿ ಶಬ್ದದಲ್ಲೂ ಗರಂ ಆಗಿರುವುದು ಗೋಚರಿಸುತ್ತಿತ್ತು.

ಸಿದ್ದರಾಮಯ್ಯ ಜನ್ಮದಿನದಂದು ಅವರ ಬೆಂಬಲಿಗರು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹಮ್ಮಿಕೊಂಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಮ್ಮ ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ,ಪಕ್ಷ ಪೂಜೆ ಮಾತ್ರವೇ ಇರುವುದು ಎಂದು ಖಾರವಾಗಿ ನುಡಿದರು.

ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕಾರಣಕ್ಕೆ ಬಂದು 50 ವರ್ಷಗಳಾದ ಹಿನ್ನೆಲೆಯಲ್ಲಿ ಅವರ‌ಅಭಿಮಾನಿಗಳು ಸಮಾರಂಭ ಮಾಡಲು ಇಚ್ಚಿಸಿದ್ದಾರೆ.

ಹಾಗೆಯೇ‌ ಮತ್ತೊಬ್ಬ ಹಿರಿಯರಾದ ಜಿ.ಪರಮೇಶ್ವರ್ ಅವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಬೇಕೆಂದು ಅವರ‌ ಅಭಿಮಾನಿಗಳೂ ಕೇಳುತ್ತಿದ್ದಾರೆ.

ಒಟ್ಟಾರೆ ನಮ್ಮಲ್ಲಿ ಪಕ್ಷಕ್ಕಾಗಿ ಏನೇ ಮಾಡಲಿ ನಾವು ಮುಂದೆ‌ ನಿಂತು ಶ್ರಮಿಸುತ್ತೇವೆ.ಆದರೆ ಒಬ್ಬ ವ್ಯಕ್ತಿಗಾಗಿ ಮಾಡಿದರೆ ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ನವರು ಅಧಿಕಾರದಲ್ಲಿದ್ದಾಗ ನಾನು ಮಂತ್ರಿ ಆಗಿರಲಿಲ್ಲ ಆದರೆ‌ ಅವರು ಸೋಲನುಭವಿಸಿದಾಗಲೂ ಅವರನ್ನು ಸಿಎಲ್ ಪಿ ಲೀಡರ್ ಮಾಡಿದೆವು.ನನಗೆ‌ ಅಧಿಕಾರ ಮುಖ್ಯ ಅಲ್ಲ ನನ್ನ ಪಕ್ಷವೇ ಮುಖ್ಯ ಎಂದು ಸಿದ್ದು ಬಣಕ್ಕೆ ಡಿಕೆಶಿ ಟಾಂಗ್ ನೀಡಿದರು.

ನನ್ನ ಹುಟ್ಟು ಹಬ್ಬವನ್ನು ಆಚರಿಸಲೇ ಬೇಡಿ ಎಂದು ಅಭಿಮಾನಿಗಳಿಗೆ ನಾನು ಹೇಳಿದ್ದೆ.ಒಂದು ಫೋಟೊ ಅಥವಾ ಬ್ಯಾನರ್ ಏನೂ ಹಾಕಬಾರದೆಂದು ಮನವಿ ಮಾಡಿದ್ದೆ,ಈಗ ಒಬ್ಬೊಬ್ಬರಿಗೆ ಒಂದೊಂದು ಆಸೆ ಇರುತ್ತೆ ಎಂದು ಪರೋಕ್ಷವಾಗಿ ಸಿದ್ದು ವಿರುದ್ಧ ಗರಂ ಆಗಿ ಡಿಕೆಶಿ ನುಡಿದರು.