ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ

ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು.ಜಿಟಿ ಜಿಟಿ ಮಳೆಯಲ್ಲೂ ಸಾವಿರಾರು ಭಕ್ತರು ಬೆಟ್ಟಕ್ಕೆ ಬಂದು ದೇವಿಯ ದರ್ಶನ ಪಡೆದರು.

ಮುಂಜಾನೆಯಿಂದಲೇ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು.

ಚಾಮುಂಡೇಶ್ವರಿ ದೇವಿಗೆ ಇಂದು ನಾಗಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ಮುಂಜಾನೆಯಿಂದಲೇ ದೇವಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.

ಬೆಳಿಗ್ಗೆ 5.30ರಿಂದಲೇ ಭಕ್ತರಿಗೆ ತಾಯಿಯ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ರಾತ್ರಿ 9.30ರವರೆಗೂ ತಾಯಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ

ಕಳೆದ ವಾರದಂತೆ ಎರಡನೇ ವಾರವೂ ಕೂಡ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಭಕ್ತರು ಲಲಿತ್ ಮಹಲ್ ಹೆಲಿಪ್ಯಾಡ್ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಅಲ್ಲಿಂದ   ಜಿಲ್ಲಾಡಳಿತದಿಂದ ಉಚಿತವಾಗಿ ವ್ಯವಸ್ಥೆ ಮಾಡಿರುವ  ಬಸ್ ಮೂಲಕ ಬೆಟ್ಟಕ್ಕೆ ತೆರಳಬೇಕಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದೇವಾಲಯದ ಒಳ ಆವರಣವನ್ನು ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿದೆ.

ಯದುವೀರ್ ಭೇಟಿ: ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಈ ವೇಳೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ರೋಪ್ ವೇ ಕೈಬಿಟ್ಟಿದ್ದು ಒಳ್ಳೆಯ ನಿರ್ಧಾರ. ಇದು ಧಾರ್ಮಿಕ ಸ್ಥಳವಾಗಿರುವುದರಿಂದ ಅದಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು  ಕೂಡ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನವನ್ನು ಪಡೆದರು.

ಚಾಮುಂಡಿಬೆಟ್ಟ ಪ್ರವೇಶಿಸುವ ಮುನ್ನವೇ    ಭಕ್ತರು ಎರಡೂ ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂಬುದರ ವರದಿಯನ್ನು ನೋಡಿಯೇ ಬೆಟ್ಟಕ್ಕೆ ಕಳುಹಿಸಲಾಗುತ್ತಿದೆ.