ಮೈಸೂರು: ಆರೋಗ್ಯವಂತ ಸಮಾಜಕ್ಕೆ ವೈದ್ಯರ ಸೇವೆ ಅತ್ಯಗತ್ಯ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ತಿಳಿಸಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮ ಆವರಣದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ, ಮೈಸೂರು ನಗರ-ಜಿಲ್ಲಾ ಬ್ರಾಹ್ಮಣ ಸಂಘ, ಅಪೂರ್ವ ಸ್ನೇಹ ಬಳಗ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯ ಭಾಸ್ಕರ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಶ್ರೀಗಳು ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸೇವೆ ಶ್ಲಾಘನೀಯವಾದದ್ದು, ವೈದ್ಯರು ಜಾತಿ, ಮತ, ಧರ್ಮರಹಿತವಾಗಿ ತಮ್ಮಲ್ಲಿಗೆ ಬಂದ ರೋಗಿಗಳ ಆರೋಗ್ಯ ಪರೀಕ್ಷೆ ನಡೆಸಿ, ಗುಣಮುಖ ಮಾಡುತ್ತಾರೆ ಎಂದು ಶ್ಲಾಘಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್ ಮಾತನಾಡಿ, ವೈದ್ಯರು ನೀಡುವ ಔಷಧಗಳಿಗಿಂತ ರೋಗಿಗಳಿಗೆ ಅವರು ನೀಡುವ ಆತ್ಮಸ್ಥೈರ್ಯದಿಂದ ಎಂಥ ಮಾರಕ ರೋಗಗಳಿಂದಾದರೂ ರೋಗಿ ಗುಣಮುಖನಾಗುತ್ತಾನೆ ಎಂದು ತಿಳಿಸಿದರು.
ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಮಹೇಶ್ ಶೆಣೈ ಮಾತನಾಡಿ, ಯುವಪೀಳಿಗೆ ಪಶ್ಚಾತ್ಯ ಸಂಸ್ಕೃತಿ ತ್ಯಜಿಸಬೇಕು, ಆರೋಗ್ಯವಿದ್ದರೆ ಮಾತ್ರ ಸಾಧನೆ, ಸಂಪಾದನೆ ಮಾಡಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿದರು.
ಆರೋಗ್ಯ ತಪಾಸಣೆ ಶಿಬಿರದಲ್ಲಿ ರಕ್ತದೊತ್ತಡ ,ಸಕ್ಕರೆ ಪರೀಕ್ಷೆ, ಬಿಎಂಐ ,ಇಸಿಜಿ ಎಕೋ ಮತ್ತು ಮ್ಯಾಮೋಗ್ರಾಮ್ ,ಪ್ಯಾಪ್ ಸ್ಮಿಯರ್ ಹಾಗೂ ಇನ್ನಿತರ ತಪಾಸಣೆಯನ್ನು ಮಾಡಲಾಯಿತು.
ಇದೇ ವೇಳೆ ಕೆಲವರು ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 34 ಯೂನಿಟ್ ರಕ್ತದಾನ ಮಾಡಿದರು.
ವೈದ್ಯ ಭಾಸ್ಕರ ಪ್ರಶಸ್ತಿ ಪಡೆದ ಡಾ॥ ಎಂ.ಎನ್.ರವಿ, ಡಾ॥ಆರತಿ ಸಂತೋಷ್, ಡಾ॥ರೂಪಾ ಪ್ರಕಾಶ್, ಡಾ॥ಕೆ.ಪಿ. ಶ್ರೀಧರ್ ವೈದ್ಯ, ಡಾ॥ಆರ್.ಯೋಗೀಶ್, ಡಾ॥ಸಿ.ಸುಹಾಸ್ ಅವರನ್ನು ಅಭಿನಂದಿಸಲಾಯಿತು.
ನಿಯೋಜಿತ ಮಹಾಪೌರರಾದ ಸುನಂದಾ ಪಾಲನೇತ್ರ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನಗರ ಪಾಲಿಕೆ ಸದಸ್ಯ ಜಗದೀಶ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಸುಧೀಂದ್ರ, ಸುಚೀಂದ್ರ, ಚಕ್ರಪಾಣಿ, ನಾಗಶ್ರೀ ಸುಚೇಂದ್ರ, ವಿದ್ಯಾ ಮತ್ತಿತರರು ಪಾಲ್ಗೊಂಡಿದ್ದರು.

