ಬೆಂಗಳೂರು: ಪೋಷಕರು ಇಂಗ್ಲಿಷ್ ಭಾಷೆಗೆ ಹೆಚ್ಚು ಆದ್ಯತೆ ಕೊಡುತ್ತಿರುವುದರಿಂದ ಪ್ರತಿ ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆದು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಬೆಂಗಳೂರು ಪ್ರಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಮಕ್ಕಳು ನೈತಿಕ ಅಂಶಗಳನ್ನು ಮೈಗೂಡಿಸಿಕೊಳ್ಳಲು ಅವರಿಗೆ ನೈತಿಕ ಶಿಕ್ಷಣವನ್ನ ಬೋಧಿಸುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದು ಹೇಳಿದರು
ಶಾಸಕರ ಅನುದಾನದಿಂದ ಮಕ್ಕಳು ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಯೋಜನೆಯನ್ನು ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದರು.
ವಾಜಪೇಯಿ ಆಡಳಿತ ಅವಧಿಯಿಂದ ಇಲ್ಲಿಯತನಕವೂ ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಕ್ರಾಂತಿಯನ್ನೇ ಮಾಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ಸರ್ವ ಶಿಕ್ಷಣ ಅಭಿಯಾನದ ಮೂಲಕ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾಗಳು ಅಭಿವೃದ್ಧಿಯನ್ನು ಸಾಧಿಸಿವೆ.
ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಂತರ ಬಂದ ಸುರೇಶ್ ಕುಮಾರ್ ಅನೇಕ ಸಕಾರಾತ್ಮಕ ಮತ್ತ ಅಭಿವೃದ್ಧಿ ಕಾರ್ಯಕ್ರಮಗಳನ್ನ ತಂದರು ಎಂದು ಹೇಳಿದರು.
ನಾನು ಸಚಿವನಾದಮೇಲೆ ಕರೋನ ಕಾರಣದಿಂದಾಗಿ ದೊಡ್ಡ ಸವಾಲನ್ನ ಎದುರಿಸಬೇಕಾಯ್ತು.
ಆದರೂ ನಾನು ಗುಣಮಟ್ಟದ ಶಿಕ್ಷಣ, ಶಿಕ್ಷಕರ ಕೊರತೆ,ಇವೆಲ್ಲದರ ಬಗ್ಗೆ ಹೆಚ್ಚು ಗಮನ ಕೊಟ್ಟು 15 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಆಯ್ಕೆಯಾದ ಶಿಕ್ಷಕರನ್ನ ಹಳ್ಳಿಗಾಡಿನ ಶಾಲೆಗಳಿಗೆ ನಿಯೋಜಿಸುವ ಕಾರ್ಯ ಆಗಲಿದೆ ಎಂದು ಹೇಳಿದರು.
ಸುಮಾರು ವರ್ಷಗಳಿಂದ ಪಿ ಟಿ ಶಿಕ್ಷಕರ ಆಯ್ಕೆ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪ್ರಮೋಷನ್ ವ್ಯವಸ್ಥೆ ನಿಂತಿದ್ದು ಅದನ್ನು ಈ ವರ್ಷದಿಂದ ಜಾರಿ ಮಾಡಲು ನಿರ್ಧರಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಶಿಕ್ಷಕರ ಬಹು ವರ್ಷಗಳ ಬೇಡಿಕೆ ವರ್ಗಾವಣೆ. ಈ ಸಮಸ್ಯೆಯನ್ನು ಬಗೆಹರಿಸಲು 24,000 ಶಿಕ್ಷಕರ ಕವನ್ಸಿಲಿಂಗ್ ಕಾರ್ಯ ಮುಗಿಸಿ ಅವರಿಗೆ ಕಾರ್ಯನಿಯೋಜನೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮತ್ತು ಮಾಧ್ಯಮ ಕಾರ್ಯದರ್ಶಿ ಮಲ್ಲಪ್ಪ ಉಪಸ್ಥಿತರಿದ್ದರು.

