ಬೆಂಗಳೂರು: ಮೈಸೂರು ದಸರಾ ಕುರಿತು ಬ್ರ್ಯಾಂಡ್ ಸೃಜಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2022 ರ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಿಎಂ ಮಾತನಾಡಿದರು.
ಈ ಬಾರಿ ಅದ್ದೂರಿ ದಸರಾ ಆಚರಿಸಬೇಕೆಂದು ಬಹಳಷ್ಟು ಮಂದಿಯಿಂದ ಒತ್ತಾಯ ಕೇಳಿಬಂದಿದ್ದು ಸರ್ಕಾರ ಒಪ್ಪಿದೆ.ಅದ್ದೂರಿ ಆಚರಣೆಗೆ ಸಕಲ ಸಿದ್ದತೆ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನವನ್ನು ಪ್ರಕಟಿಸಬೇಕು.
ಮುಂಬೈ, ದೆಹಲಿ ಹಾಗೂ ಚನ್ನೈ ವಿಮಾನನಿಲ್ದಾಣಗಳಲ್ಲಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮೈಸೂರು ದಸರಾ ಕುರಿತು ಪ್ರಚಾರ ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಲಯದ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಿಟ್ ನಲ್ಲಿ ಬೇಲೂರು, ಹಳೇಬೀಡು ಮುಂತಾದ ಪ್ರದೇಶಗಳಿಗೆ ಪ್ರವಾಸದ ಯೋಜನೆ, ಪ್ರಯಾಣ ಹಾಗೂ ವಸತಿ ಎಲ್ಲವೂ ಒಂದೇ ಟಿಕೆಟ್‍ನಲ್ಲಿ ಸಾಧ್ಯವಾಗಲಿದೆ.
ಇದಕ್ಕೆ ವೆಬ್‍ಸೈಟ್ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ದಸರಾಕ್ಕೆ ಇದು ಪೂರಕವಾಗಲಿದೆ ಎಂದು ಸಿಎಂ ತಿಳಿಸಿದರು.
ನಾಡಹಬ್ಬಕ್ಕೆ ಸಂಬಂಧಿಸಿದಂತೆ ಹಿಂದೆ ಅನುಸರಿಸುತ್ತಿದ್ದ ಗಜಪಯಣ ಸೇರಿದಂತೆ ಪಾರಂಪರಿಕ ಪದ್ದತಿಗಳನ್ನು ಪುನ: ಪ್ರಾರಂಭಿಸಲಾಗುವುದು ಎಂದು ಹೇಳಿದರು.
ದಸರಾ ಹಬ್ಬಕ್ಕೆ 15 ದಿನಗಳ ಮುನ್ನವೇ ವಸ್ತು ಪ್ರದರ್ಶನ ಉದ್ಘಾಟಿಸಲು ಸೂಚಿಸಲಾಗಿದೆ ಎಂದರು.
ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ದಸರಾಕ್ಕೆ ತಲಾ 1.00 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಕಲಾವಿದರಿಗೆ ಪ್ರೋತ್ಸಾಹ: ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದರ ಜೊತೆ ಪ್ರತಿನಿತ್ಯ ಒಬ್ಬ ರಾಷ್ಟ್ರಮಟ್ಟದಲ್ಲಿ ಖ್ಯಾತಿಯಳ್ಳ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಎರಡು ವರ್ಷಗಳಿಂದ ಸಾಂಪ್ರದಾಯಿಕ ಸರಳ ದಸರಾ ಆಚರಿಸಲಾಗಿದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಬೇಕೆಂಬ ಅಭಿಪ್ರಾಯವನ್ನು ಸರ್ಕಾರ ಮನ್ನಿಸಿದೆ.
ಸೆಪ್ಟೆಂಬರ್ 26ರಂದು ನವರಾತ್ರಿ, ದಸರಾ ಪ್ರಾರಂಭವಾಗಲಿದೆ ಅಕ್ಟೋಬರ್ 5 ವಿಜಯದಶಮಿಯಂದು ನಂದಿಧ್ವಜ ಪೂಜೆ, ಪುಷ್ಪಾರ್ಚನೆ ಮೆರವಣಿಗೆ ನಡೆಯಲಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

