ಎಚ್ ಡಿ ಕೋಟೆ: ಕಬಿನಿ ಜಲಾಶಯದ ಉದ್ಯಾನವನ ಸ್ವಲ್ಪ ಗೊಂದಲದಲ್ಲಿದೆ ಅದನ್ನು ಆದಷ್ಟು ಬೇಗ ನಿವಾರಣೆ ಮಾಡಿ ಇದೇ ವರ್ಷ ಈ ಉದ್ಯಾನವನದ ಕಾಮಗಾರಿ ಆರಂಭಿಸುತ್ತೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಬೊಮ್ಮಾಯಿ ಪತ್ನಿಯೊಂದಿಗೆ ಬಾಗಿನ ಅರ್ಪಿಸಿ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.
ಹೆಚ್.ಡಿ.ಕೋಟೆ ತಾಲೂಕು ನಂಜುಂಡಪ್ಪ ವರದಿಯಲ್ಲೂ ಹಿಂದುಳಿದ ತಾಲೂಕು ಅಂತ ಇದೆ. ಅದರ ಸಮಗ್ರ ಅಭಿವೃದ್ಧಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ಈಗಾಗಲೇ ರೂಪಿಸಿದ್ದೇವೆ ಎಂದು ತಿಳಿಸಿದರು.
ಮಳೆ ಬಂದಾಗ ಮನೆ ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಎಲ್ಲೆಲ್ಲಿ ಮನೆ ಬಿದ್ದಿದೆ ಅವುಗಳನ್ನು ಸರಿಪಡಿಸಲು ಕೂಡಲೇ ಅನುದಾನ ನೀಡುವಂತೆ ಏರ್ಪಾಟು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಚಿವರುಗಳಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಅನಿಲ್ ಚಿಕ್ಕಮಾದು, ಹರ್ಷವರ್ಧನ್ ಮತ್ತಿತರರು ಹಾಜರಿದ್ದರು.

