ಮೈಸೂರು: ಯಾರಿಗೂ ಕೇಡು ಬಯಸದೆ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂದು ವಂಗೀಪುರ ಮಠದ ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಕೆಂಪನಂಜಾಂಬ ಅಗ್ರಹಾರದಲ್ಲಿರುವ ಸರಸ್ವತಿ ನಿಲಯದಲ್ಲಿ ಏರ್ಪಡಿಸಿದ್ದ ಋಗ್ವೇದ ಉಪಾಕರ್ಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸರ ವಾಣಿಯಂತೆ ಜೀವನದ ಅಂತ್ಯದವರೆಗೂ ನಾವೆಲ್ಲ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಹೇಳಿದರು.
ಉಪ ಎಂದರೆ ಸಮೀಪ. ದೇವರ ಸಾಮಿಪ್ಯ ಹೊಂದಲು (ಮೋಕ್ಷ ಪ್ರಾಪ್ತಿ) ಪ್ರತಿಯೊಬ್ಬರು ದೇವರ ಮೇಲೆ ಶ್ರದ್ಧೆ ಇಟ್ಟು, ಉಪಾಸನೆ ಮಾಡಿ ಮೋಕ್ಷ ಪಡೆಯಲು ಪ್ರಯತ್ನಿಸಬೇಕು.
ಸದಾಚಾರ, ಒಳ್ಳೆಯ ಚಾರಿತ್ರ್ಯ, ಸನ್ಮಾರ್ಗಗಳನ್ನು ಅಳವಡಿಸಿಕೊಂಡು ದೇವರನ್ನು ಪೂಜಿಸಿದರೆ ನಮ್ಮ ಜನ್ಮ ಸಫಲವಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮಾತನಾಡಿ ವಿವಿಧ ಸಂಘ ಸಂಸ್ಥೆಗಳು ಕೃಷ್ಣಮೂರ್ತಿಪುರಂ ರಾಮಮಂದಿರ, ಜಯನಗರ ರಾಮಮಂದಿರದಲ್ಲಿ ಆ.11ರಂದು ಸಾಮೂಹಿಕ ಜನಿವಾರ ಬದಲಾಯಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ಬ್ರಾಹ್ಮಣರು ಯಜ್ಞೋಪವೀತ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ವೇದಘೋಷ ನಂತರ ಹೋಮ ನೆರವೇರಿಸಿದರು.
ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಿತ್ಯ ಸಂಧ್ಯಾವಂದನೆ ಪುಸ್ತಕ ಹಾಗೂ ಗಾಯತ್ರಿ ಮಂತ್ರ ಪುಸ್ತಕ ನೀಡಿ ಋಗ್ವೇದ ಉಪಾಕರ್ಮದ ಶುಭಾಶಯ ಕೋರಲಾಯಿತು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್,ಸುಚಿಂದ್ರ ,ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ಬಿ.ಆರ್. ಸೀತಾರಾಮಯ್ಯ, ನಂಜುಂಡಸ್ವಾಮಿ, ಮಹೇಶ್ ಕುಮಾರ್, ಎಸ್. ಎಲ್. ನಾಗರಾಜ್, ಬಾಲಾಜಿ ಮತ್ತಿತರರು ಇದ್ದರು.

