ಅರಮನೆಯಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಭರದ ಸಿದ್ಧತೆ ನಡೆದಿದ್ದು, ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯು‌ ನೇತೃತ್ವದ  ಗಜಪಡೆಯನ್ನು ಅರಮನೆಗೆ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಮೊದಲ ಹಂತದಲ್ಲಿ ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ 9 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದು ಕಳೆದ ಭಾನುವಾರದಿಂದ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.

ಡಿಸಿಎಫ್ ಡಾ.ಕರಿಕಾಳನ್ ನೇತೃತ್ವದಲ್ಲಿ ದಸರಾ ಗಜಪಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗಜಪಡೆಗೆ ಬೆಲ್ಲ, ಕಾಯಿ, ಹಣ್ಣುಗಳು, ವಿವಿಧ ಬಗೆಯ ಸಿಹಿ ತಿನಿಸುಗಳನ್ನು ನೀಡಿ ಅರಣ್ಯ ಭವನದಿಂದ ಬೀಳ್ಕೊಡಲಾಯಿತು.

ಈ ಬಾರಿ ಒಟ್ಟು 14 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ.

ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆ ಆವರಣಕ್ಕೆ  ಅರಣ್ಯ ಭವನದಿಂದ 3.5 ಕಿಮೀ ಕಾಲ್ನಡಿಗೆ ಮೂಲಕ ಆಗಮಿಸಿದವು.

ಅರಮನೆ ಆಡಳಿತಮಂಡಳಿ ವತಿಯಿಂದ 9.20ರಿಂದ 10ರ ಶುಭ ಲಗ್ನದಲ್ಲಿ ದಸರಾ ಗಜಪಡೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಜಿಲ್ಲಾಡಳಿತ ಪುಷ್ಪಾರ್ಚನೆ ಸಲ್ಲಿಸಿ ದಸರಾ ಗಜಪಡೆಗಳಿಗೆ ಗೌರವ ಸಲ್ಲಿಸಿತು. ಅರ್ಚಕ ಪ್ರಹ್ಲಾದ್ ರಾವ್  ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಪೂಜೆಯಲ್ಲಿ ಭಾಗಿಯಾಗಿದ್ದರು.