ಬೆಂಗಳೂರು:ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣೆ ವ್ಯವಸ್ಥೆ ಜಾರಿಗೆ ಕ್ರಮ ತೆಗೆದುಕೊಂಡಿದ್ದು ಇದರ ಜಾರಿಗೆ ಹಿಂದೇಟು ಹಾಕುವ ಕುಲಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಎಚ್ಚರಿಸಿದ್ದಾರೆ.
ಸಬೂಬು ಹೇಳಿ ಯೋಜನೆ ಜಾರಿಗೆ ನಿರ್ಲಕ್ಷ್ಯ ತೋರುವ ಕುಲಸಚಿವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಭೆ ನಡೆಸಿದ ಅಶ್ವಥ್ ನಾರಾಯಣ, ಕರ್ತವ್ಯದಲ್ಲಿ ವಿಫಲರಾಗಿರುವ ಕುಲ ಸಚಿವರ ಬಗ್ಗೆ ಕುಲಪತಿಗಳೇ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಯುಯುಸಿಎಂಎಸ್ ವ್ಯವಸ್ಥೆಯು ತಂತ್ರಜ್ಞಾನದ ವರದಾನವಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ ಮತ್ತು ಖರ್ಚು ವೆಚ್ಚದಲ್ಲಿ ಹಿಡಿತ ಸಾಧಿಸಿ ವಿ.ವಿ.ಗಳನ್ನು ನಿರ್ವಹಿಸಲು ಇದು ಪರಿಣಾಮಕಾರಿ ವ್ಯವಸ್ಥೆಯಾಗಿದೆ ಎಂದು ತಿಳಿಸಿದರು.
ಇವತ್ತಿನ ಮಟ್ಟಿಗೆ ಇದು ಪರಿಹಾರವಾಗಿರುವುದರಿಂದ ಯಾರೊಬ್ಬರೂ ಸಬೂಬು ಹೇಳುವಂತಿಲ್ಲ ಎಂದು ಅವರು ಸೂಚ್ಯವಾಗಿ ಹೇಳಿದರು.
ಈ ವ್ಯವಸ್ಥೆಯ ಜಾರಿಯು ಕ್ರಾಂತಿಕಾರಕ ತೀರ್ಮಾನವಾಗಿದೆ. ಯಾವುದೇ ಒಂದು ವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ಎಲ್ಲ ವಿ.ವಿ.ಗಳೂ ಯುಯುಸಿಎಂಎಸ್ ಜಾರಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು.
ಕೆಲವು ವಿ.ವಿ.ಗಳಲ್ಲಿ ಮಾತ್ರ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಿವೆ. ಬಹುತೇಕ ವಿವಿಗಳಲ್ಲಿ ಪರೀಕ್ಷೆ ನಡೆಸಿದರೂ ಮೌಲ್ಯಮಾಪನ ಮಾಡಿಲ್ಲ. ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಈ ಎಲ್ಲ ಪ್ರಕಿಯೆಗಳನ್ನು ಈ ತಿಂಗಳ ಒಳಗೆ ಮುಗಿಸಬೇಕು ಎಂದು ತಾಕೀತು ಮಾಡಿದರು.
ಯುಯುಸಿಎಂಎಸ್ ಜಾರಿಯಲ್ಲಿ ಇರುವ ತೊಡಕುಗಳನ್ನು ತಿಳಿದುಕೊಳ್ಳಲು ಈಗಾಗಲೇ ನಿತ್ಯ ವಿಡಿಯೋ ಕಾನ್ಫರೆನ್ಸಿಂಗ್ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಇದ್ದರೂ ಗಮನಕ್ಕೆ ತರಬಹುದು. ಆದರೆ ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಅಶ್ವಥ್ ನಾರಾಯಣ ತಿಳಿಸಿದರು.

