ಮೈಸೂರು: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು 2017ರಲ್ಲಿ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಿ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ್ದರಂತೆ.
ಈ ವಿಚಾರವನ್ನು ಐದು ವರ್ಷಗಳ ನಂತರ ಮಾಜಿ ಮೇಯರ್ ರವಿಕುಮಾರ್ ಬಾಯಿಬಿಟ್ಟಿದ್ದು ಸಿದ್ದು ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿವೆ.
ಈ ಬಗ್ಗೆ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಮಾಜಿ ಮೇಯರ್ ರವಿಕುಮಾರ್,ಇದು ನಿಜ.
2017ರಲ್ಲಿ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗಿದ್ದರು. ಆ ಸಂದರ್ಭದಲ್ಲಿ ದಸರಾ ಹಬ್ಬದ ವೇಳೆ ಮೈಸೂರು ಜಿಲ್ಲಾಡಳಿತ ಲಲಿತಮಹಲ್ ಪ್ಯಾಲೇಸ್ ನಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಸಿದ್ದಪಡಿಸಿತ್ತು ಎಂದು ತಿಳಿಸಿದರು.
ಆಗ ಸಿದ್ದರಾಮಯ್ಯ ಬಂದು ನಾನು ಸೇರಿದಂತೆ ಬಿಜೆಪಿಯ ಸಿ.ಟಿ.ರವಿ ಮತ್ತಿತರರನ್ನು ಮಾತನಾಡಿಸಿದರು.
ನಂತರ ಸೀದಾ ಮಾಂಸಾಹಾರ ಇದ್ದೆಡೆ ಹೋಗಿ ಊಟ ಮಾಡಿದರು.ಇದಾದ ನಂತರ ನಮ್ಮಲ್ಲೇ ನಾವು ಚರ್ಚಿಸಿದೆವು.
ಸಿದ್ದರಾಮಯ್ಯ ನಂತರ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.ಇದು ತಪ್ಪು.ಇದಾದ ನಂತರ ಅವರಿಗೆ ಮತ್ತೆ ಆ ತಾಯಿಗೆ ಪುಷ್ಪಾರ್ಚನೆ ಮಾಡುವ ಅವಕಾಶ ಬರಲೇ ಇಲ್ಲ ಎಂದರು.
ಈ ವಿಷಯ ಹೊರ ಬರುತ್ತಿದ್ದಂತೆ ಬಿಜೆಪಿ ನಾಯಕರು ಮತ್ತೆ ಸಿದ್ದು ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ.
ರೇಣುಕಾಚಾರ್ಯ, ವಿಜಯೇಂದ್ರ ಮತ್ತಿತರರು ಮಾತನಾಡಿ, ಯಾವುದೇ ಊಟ ಮಾಡುವುದು ಅವರವರ ಹಕ್ಕು.ಇದರ ಬಗ್ಗೆ ಎರಡು ಮಾತಿಲ್ಲ. ಆದರೆ ನಾಟಿ ಕೋಳಿ ತಿಂದು ದೇವಾಲಯಕ್ಕೆ ಹೋಗಿದ್ದೆ ಎಂದು ಹೇಳುವುದು ಸಿದ್ದರಾಮಯ್ಯ ಅವರ ಉದ್ದಟತನ ತೋರಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ನಾಡಲ್ಲಿ ಮಾಂಸಾಹಾರ ಸೇವಿಸಿ ಯಾರೂ ಪೂಜೆ ಮಾಡುವುದಿಲ್ಲ.ಆದರೆ ಸಿದ್ದರಾಮಯ್ಯ ನಾಡದೇವಿಗೆ ಪುಷ್ಪಾರ್ಚನೆ ಮಾಡಿ ನಮ್ಮ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.

