ಬೆಂಗಳೂರು: ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್ ಹೆಸರು ನೋಂದಣಿ ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆ ತರಲಾಗುವುದು. ಬಳಿಕ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ವಾರ್ಡ್‌ಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ರೋಗಿಗಳನ್ನು ಮಾತನಾಡಿಸಿ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಒದಗಿಸುವುದಾಗಿ ತಿಳಿಸಿದರು.
ಬಳಿಕ ಮಾತನಾಡಿದ ಸಚಿವರು, ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನದಟ್ಟಣೆ ಕಡಿಮೆ ಮಾಡಲು, ವೈದ್ಯರ ಭೇಟಿಗೆ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಸಂದೇಶ ಮೂಲಕ ಸಮಯ ನಿಗದಿ ಮಾಡಿಕೊಳ್ಳುವ ವ್ಯವಸ್ಥೆ ತರಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಜನರ ಉದ್ದದ ಸಾಲು ಕಡಿಮೆ ಮಾಡಲು ಈ ಕ್ರಮ ವಹಿಸಲಾಗುತ್ತಿದೆ. ವೈದ್ಯರ ಆಪಾಯಿಂಟ್‌ಮೆಂಟ್ ಸಮಯ, ಯಾವ ವೈದ್ಯರು ಎಂಬಿತ್ಯಾದಿ ಮಾಹಿತಿಗಳನ್ನು ಮೊಬೈಲ್‌ಗೆ ಸಂದೇಶ ಕಳುಹಿಸುವ ವ್ಯವಸ್ಥೆ ತರಲಾಗುತ್ತಿದೆ. ಆಸ್ಪತ್ರೆಗೆ ಯಾರೂ ಬಂದು ಕಾಯುವ ಅಗತ್ಯವಿಲ್ಲ. ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಜನರು ಬರುವ ಮುನ್ನವೇ ಆನ್‌ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಹಾಗೂ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ತರಲಾಗುವುದು ಎಂದು ಹೇಳಿದರು.
ಹಣ ವಾಪಸ್ ಕೊಡಿಸುವವರೆಗೂ ಬಿಡುವುದಿಲ್ಲ: ಕೋವಿಡ್ ರೋಗಿಗಳಿಂದ ಹಣ ಪಡೆದು ಬಳಿಕ ಸರ್ಕಾರದಿಂದ ಹಣ ಪಡೆದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಿ, ಹಣವನ್ನು ರೋಗಿಗಳಿಗೆ ಹಿಂದಿರುಗಿಸಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರ ಈ ರೀತಿಯ ಕ್ರಮ ವಹಿಸಿ, 1.58 ಕೋಟಿ ರೂ. ಹಣವನ್ನು ರೋಗಿಗಳ ಕುಟುಂಬಕ್ಕೆ ವಾಪಸ್ ಮಾಡಲಾಗಿದೆ. ಇನ್ನು ಉಳಿದ ಮೊತ್ತವನ್ನು ಕೂಡ ವಾಪಸ್ ಕೊಡಿಸಲಾಗುವುದು. ಮೊತ್ತವನ್ನು ವಾಪಸ್ ಕೊಡಿಸುವವರೆಗೂ ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಹಾಜರಿದ್ದರು.

