ಮೈಸೂರು: ಕಳೆದ ಎರಡು ವರ್ಷ ಕೋವಿಡ್ ನಿಂದಾಗಿ ವಿಗ್ರಹ ತಯಾರಕರು ಹಾಗೂ ಮಾರಾಟಗಾರರ ಬದುಕೇ ಅಸ್ತವ್ಯಸ್ತವಾಯಿತು ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ತಿಳಿಸಿದರು.
ಸುಮಾರು 40 ವರ್ಷದಿಂದ ಗಣೇಶ - ಗೌರಿ ಮೂರ್ತಿಯನ್ನು ತಯಾರಿಸುತ್ತಿರುವವರನ್ನು ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಸರ್ಕಾರ ಮೂರ್ತಿ ತಯಾರಕರಿಗೆ ವಿಶೇಷ ಸಹಾಯಧನ ನೀಡಬೇಕು. ಮೂರ್ತಿ ತಯಾರಕರ ಹಿತ ಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಷ್ಟಗಳಿಂದಾಗಿ ವಿಗ್ರಹಗಳ ತಯಾರಕರು ಚಿಂತಾಕ್ರಾಂತರಾಗಿದ್ದಾರೆ,ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನೇ ನಂಬಿ ಬದುಕುವ ಹಲವ ಕುಟುಂಬಗಳು ಜಿಲ್ಲೆಯಲ್ಲಿವೆ ಎಂದರು.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿ ಒಂದಿಷ್ಟು ಹಣ ಸಂಪಾದಿಸುವ ವ್ಯಾಪಾರಿಗಳೂ ಇದ್ದಾರೆ ಎಂದು ಹೇಳಿದರು.
ಹಲವು ವರ್ಷಗಳಿಂದ ಮೂರ್ತಿ ತಯಾರಿಕೆ ಮಾಡಿ ಜೀವನ ನಡೆಸುತ್ತಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ, ಇಂದಿನ ಮಕ್ಕಳು ಪರಿಸರದೊಂದಿಗೆ ಬೆರೆಯುವ ಅವಕಾಶಗಳನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರಪಟ್ಟರು.
ಮಕ್ಕಳು ಮಣ್ಣು, ಪ್ರಕೃತಿಯ ಜೊತೆಗೆ ಬೆರೆಯುತ್ತಿಲ್ಲ. ಗಣಪತಿ ಹಬ್ಬ ಸಮೀಪವಿರುವುದರಿಂದ ಪ್ರತಿಯೊಬ್ಬರು ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾರೆ.
ಅಂತಹ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಿದಾಗ ಪ್ರಕೃತಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಕುಂಬಾರಗೇರಿಯಲ್ಲಿ 40 ವರ್ಷದಿಂದ ಗೌರಿ,ಗಣೇಶ ತಯಾರಿಸುತ್ತಿರುವ ಶಂಕ್ರಮ್ಮ ಶ್ರೀನಿವಾಸಮೂರ್ತಿ,ವಿ. ವೆಂಕಟಮ್ಮ ,ಶಾಂತಮ್ಮ ,ನಿಂಗಮ್ಮ,ಶಾರದಾ ,ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು.
ಎಸ್ ಎನ್ ರಾಜೇಶ್ , ರೇವಣ್ಣ ,ಬಾಬಣ್ಣ ,ಸೀನ,ಸತೀಶ್, ಪೃಥ್ವಿ ಸಿಂಗ್ ಚಂದ್ರಾವತ್ ,ಭೀಮರಾಜ್ ಪರಿಯಾರ್ ,ಪಂಕಜ್ ಪಾರೀಕ ಮತ್ತಿತರರು ಹಾಜರಿದ್ದರು.

