ಚಿತ್ರದುರ್ಗ: ಅಹಿತಕರ ಮತ್ತು ಅನಾರೋಗ್ಯಕರ ಪರಿಸ್ಥಿತಿಯನ್ನು ನಾವು ಧೈರ್ಯವಾಗಿ ಎದರಿಸುತ್ತೇವೆ ಎಂದು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದ್ದಾರೆ.
ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಪಲಾಯನ ಮಾಡುವುದಿಲ್ಲ. ಸಮಸ್ಯೆಯಿಂದ ಹೊರ ಬರುತ್ತೇವೆ ಎಂದು ಶ್ರೀಗಳು ತಿಳಿಸಿದರು.
ಭಕ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ನಾವು ಪಾಲಾಯನ ಮಾಡುವುದಿಲ್ಲ.ಎಲ್ಲಿಗೂ ಹೋಗುವುದಿಲ್ಲ ಇಲ್ಲೇ ಇದ್ದು ಎಲ್ಲವನ್ನೂ ಎದುರಿಸುತ್ತೇವೆ ಎಂದರು.
ಶ್ರೀಗಳು ತಲೆ ಮರೆಸಿಕೊಂಡಿದ್ದಾರೆ. ಮಹಾರಾಷ್ಟ್ರದತ್ತ ಪಲಾಯನವಾಗುತ್ತಿದ್ದಾರೆ ಎಂಬೆಲ್ಲಾ ವದಂತಿಗಳು ಹರಡಿದ್ದವು.
ಆದರೆ, ಹಾವೇರಿಯಿಂದ ಚಿತ್ರದುರ್ಗಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆಗಮಿಸಿದ ಶ್ರೀಗಳು ಸಾರ್ವಜನಿಕರನ್ನು ಉದ್ದೇಶಿಸಿ ನಗುಮುಖದಲ್ಲೇ ಮಾತನಾಡಿದರು.
ನಿಮ್ಮೆಲರ ಸಲುವಾಗಿ ನಾನು ಧೈರ್ಯವಾಗಿದ್ದೇನೆ. ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಎದುರಾಗಿರುವ ಸಂದರ್ಭವನ್ನು ಧೈರ್ಯವಾಗಿ ಸಹನೆ ಮತ್ತು ಬುದ್ದಿವಂತಿಕೆಯಿಂದ ಎದುರಿಸೋಣ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ತಮ್ಮ ವಿರುದ್ಧ 15 ವರ್ಷಗಳಿಂದಲೂ ಪಿತೂರಿ ನಡೆಯುತ್ತಲೇ ಇದೆ. ಈ ಮೊದಲು ಮಠದ ಒಳಗೆ ನಡೆಯುತ್ತಿತ್ತು. ಈಗ ಹೊರಗೆ ನಡೆಯುತ್ತಿದೆ. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಕಾಣುವ ಅಗತ್ಯವಿದೆ ಎಂದು ಹೇಳಿದರು.
ತಾವು ಈ ನೆಲದ ಕಾನೂನನ್ನು ಗೌರವಿಸುವ ಮಠಾಪತಿಯಾಗಿ, ಪೀಠಾಧ್ಯಕ್ಷರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಸಾರ್ವಜನಿಕರು, ಅಭಿಮಾನಿಗಳು ವದಂತಿಗಳು, ಊಹಾಪೋಹಗಳನ್ನು ನಂಬಬಾರದು ಎಂದು ಶ್ರೀಗಳು ಹೇಳಿದರು.
ಮುರುಘಾಮಠ ಒಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿತ್ತು. ನಾವು ನ್ಯಾಯಬದ್ಧವಾಗಿದ್ದೇವೆ. ಎಲ್ಲಾ ಸಮುದಾಯಗಳಿಗೂ ಒಳ್ಳೆಯದನ್ನು ಬಯಸುತ್ತೇವೆ.
ಏನೋ ಅಹಿತಕರ, ಅನಾರೋಗ್ಯಕರ ಸಂದರ್ಭ ಸೃಷ್ಟಿಯಾಗಿದೆ. ಅದರಿಂದ ಹೊರಗೆ ಬಂದೇ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದರು.

