ಬೆಂಗಳೂರು: ನಾವು 2013ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಬಿಜೆಪಿಯವರು ಏನೇನು ಮಾಡಿದ್ದಾರೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜೊತೆಗೂಡಿ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು 2018ರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ ವಚನದೊಂದಿಗೆ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು 3 ವರ್ಷಗಳಾಯಿತು ಎಷ್ಟು ವಚನಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಭರವಸೆಗಳಲ್ಲಿ 10% ಕೂಡ ಅವರು ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ನಂತರ ಆ ಮಾತಿನಂತೆ ನಡೆದುಕೊಳ್ಳಬೇಕು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಬಿಜೆಪಿಯ ಭರವಸೆಗಳನ್ನೇ ಅವರ ಮುಂದಿಟ್ಟು ಉತ್ತರಿಸುವಂತೆ ಕೇಳಿದ್ದೇವೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ ನೋಡೋಣ ಎಂದು ಸಿದ್ದು ಸವಾಲು ಹಾಕಿದರು.
ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 150 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ವಚನ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೇವಲ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ 100 ಲಕ್ಷ ಕೋಟಿ ಎಲ್ಲಿ ಎಂದು ಪ್ರಶ್ನಿಸಿದರು.
ಧರ್ಮ, ಜಾತಿ ಹೆಸರಿನಲ್ಲಿ ವಿವಾದಗಳನ್ನು ಸೃಷ್ಟಿಸಿ ಜನರ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಜೊತೆಗೆ ರಾಜ್ಯದ ಮರ್ಯಾದೆಯನ್ನೂ ಕಳೆದಿದ್ದಾರೆ ಎಂದು ಸಿದ್ದು ಕಿಡಿಕಾರಿದರು.
ಸ್ವಾತಂತ್ರ್ಯ ನಂತರ ನಾನು ಮುಖ್ಯಮಂತ್ರಿಯಾಗುವ ಮೊದಲು ರಾಜ್ಯದ ಮೇಲೆ 1.20 ಲಕ್ಷ ಕೋಟಿ ಸಾಲ ಇತ್ತು, ನಾನು ಕೊನೆಯ ಬಜೆಟ್ ಮಂಡಿಸಿದಾಗ ಸಾಲದ ಒಟ್ಟು ಮೊತ್ತ 2.40 ಲಕ್ಷ ಕೋಟಿ ಇತ್ತು. ಈಗ ಕಳೆದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ 5.40 ಲಕ್ಷ ಕೋಟಿ ರೂಗಳಾಗಿದೆ.ಬಿಜೆಪಿ ಮೂರು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ.
021-22ರಲ್ಲ ಒಂದೇ ವರ್ಷ 80 ಸಾವಿರ ಕೋಟಿ ಸಾಲ ಮಾಡಲಾಗಿದೆ. ಬಿಜೆಪಿಯವರು ಇದಕ್ಕೆ ಉತ್ತರ ಹೇಳಲಿ ಎಂದು ಆಗ್ರಹಿಸಿದರು.
ಅಭಿವೃದ್ಧಿ ಮಾಡಲು ಸಾಲ ಮಾಡುವುದು ಸಾಮಾನ್ಯ. ಆದರೆ, ಬಿಜೆಪಿ ಸಾಲದ ಹಣವನ್ನು ಅಭಿವೃದ್ಧಿ ಬಳಸುವ ಬದಲು ಸಂಬಳ ಕೊಡಲು ಬಳಕೆ ಮಾಡಿದೆ.
ಸಾಲ ಮಾಡಿದ ಹಣದಲ್ಲೂ ಶೇ.40ರಷ್ಟು ಕಮಿಷನ್ ಹೊಡೆದಿದ್ದಾರೆ. ನನ್ನ ನಲವತ್ತು ವರ್ಷಗಳ ರಾಜಕಾರಣದಲ್ಲಿ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಲು ಬಿಟ್ಟಿದ್ದನ್ನು ನೋಡಿರಲಿಲ್ಲ. ಇವರ ಕಾಲದಲ್ಲಿ ಅದೂ ನಡೆದಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಚಾರ ನಡೆದಿರಲಿಲ್ಲವೇ ಎಂದು ಬಿಜೆಪಿ ಕೇಳುತ್ತಾರೆ. ನಮ್ಮ ಕಾಲದ್ದೂ ಸೇರಿಸಿ ತನಿಖೆ ಮಾಡಿಸಿ ಎಂದೇ ನಾವು ಹೇಳುತ್ತಿದ್ದೇವೆ.
ಆದರೂ ತನಿಖೆಗೆ ಬಿಜೆಪಿ ಸರ್ಕಾರ ತಯಾರಿಲ್ಲ ಹೆದರುತ್ತಿದೆ. ದಾಖಲೆ ಕೇಳುತ್ತಾರೆ. ಇದು ಲಜ್ಜೆಗೆಟ್ಟ, ಭಂಡತನದ ಸರ್ಕಾರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ನಮ್ಮ ಕಾಲದಲ್ಲಿ ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು. ಏಕೆಂದರೆ ನಾವು ತಪ್ಪು ಮಾಡಿರಲಿಲಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ತನಿಖೆಗೆ ಕೊಡಿ ಎಂದು ಒತ್ತಾಯಿಸಿದರು.
ಪಿಎಸ್ಐ ನೇಮಕಾತಿಯಲ್ಲಿ ಹಗರಣ ನಡೆದಿಲ್ಲ ಎಂದು ಗೃಹ ಸಚಿವ ಅರಗಜ್ಞಾನೆಂದ್ರ ಹೇಳಿದ್ದರು. ತನಿಖೆ ನಡೆದಾಗ ಎಡಿಜಿಪಿಯ ಬಂಧನವಾಗಿದೆ. ಸರ್ಕಾರದ ಕುಮ್ಮಕ್ಕಿಲ್ಲದೆ ಹಗರಣ ನಡೆಯಲು ಸಾಧ್ಯವೇ ಎಂದು ಸಿದ್ದು ಖಾರವಾಗಿ ಪ್ರಶ್ನಿಸಿದರು.

