ಭಾರೀ ಮಳೆ:ಜನ, ಜಾನುವಾರುಗಳ ರಕ್ಷಣೆಗೆ ಆದ್ಯತೆ -ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು ಜನ, ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾನಿಗೊಳಗಾದ ಮನೆಗಳಿಗೆ ತಕ್ಷಣ 10 ಸಾವಿರ ಪರಿಹಾರ ನೀಡುವುದಾಗಿ ಪ್ರಕಟಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಾರು 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ,16 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.
ಮೊದಲು ಸಂಕಷ್ಟಕ್ಕೆ ಸಿಲುಕಿರುವ ಜನರು ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಎಲ್ಲೆಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿವೆಯೋ ತಕ್ಷಣವೇ ಪರಿಹಾರ ಕಲ್ಪಿಸಲು 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ.
ಎಲ್ಲೆಲ್ಲಿ ಜನ ವಸತಿಗೆ ನೀರು ನುಗ್ಗಿದೆಯೋ ಅಲ್ಲಿ ಆಶ್ರಯ ನೀಡಲು 900 ಕೋಟಿ ಹಣ ಎಲ್ಲ ಡಿಸಿಗಳ ಖಾತೆಯಲ್ಲಿದೆ.
ಬೆಳೆ ಸಮೀಕ್ಷೆ ಮಾಡಿ, ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ತಗ್ಗು ಪ್ರದೇಶಗಳಲ್ಲಿರುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ನದಿಪಾತ್ರಗಳಲ್ಲಿರುವ ಜನರು ಕೂಡ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕೆಂದು ಸಿಎಂ ಮನವಿ ಮಾಡಿದರು.
ಬೆಂಗಳೂರು- ಮೈಸೂರು ಹೆದ್ದಾರಿಯ ರಾಮನಗರ, ಚನ್ನಪಟ್ಟಣ ಬಳಿ ಭಾರೀ ಮಳೆಯಾಗಿ ನೀರು ರಸ್ತೆಯಲ್ಲೇ ನಿಂತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. 
ತಕ್ಷಣವೇ ನೀರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜನರು ಈ ರಸ್ತೆಯಲ್ಲಿ ಸಂಚರಿಸದೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು‌ ಎಂದು ತಿಳಿಸಿದರು.
ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಯಾರೂ ಕೂಡಾ ಹುಚ್ಚಾಟ ಮಾಡಬಾರದು.
ನೀರು ತಗ್ಗಿದ ಬಳಿಕ ಸಂಚರಿಸುವಂತೆ ಮನವಿ ಮಾಡಿದರು.
ಎಲ್ಲೆಲ್ಲಿ ಟ್ರಾನ್ಸ್‍ಫಾಮರ್‍ಗಳು ಕೆಟ್ಟು ಹೋಗಿದೆವೊ ತಕ್ಷಣವೇ ದುರಸ್ತಿಗೊಳಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಹಿರಿಯ ನಾಯಕರಾದ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಪ್ರಮುಖವಾಗಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿಯಾಗಿ ಬಂದಿದ್ದಾರೆ ಎಂದು ಇದೇ ವೇಳೆ ಸಿಎಂ ತಿಳಿಸಿದರು. 

ಪ್ರಧಾನಿಗಳು 2ನೇ ತಾರೀಖು ಮಂಗಳೂರಿಗೆ ಬರುತ್ತಿದ್ದಾರೆ. ಪ್ರಧಾನಿಗಳ ಕಾರ್ಯಕ್ರಮದ ಯಶಸ್ವಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.