ಬೆಂಗಳೂರು: ರಾಮನಗರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗಲು ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ರಾಮನಗರದಲ್ಲಿ ಭಕ್ಷಿ ಕೆರೆ ಒಡೆಯಲು ಕಾರಣ ಏನು, ಭಕ್ಷಿ ಕೆರೆ ಒಡೆದಿದ್ದಕ್ಕೇ ನೀರಿನ ಪ್ರವಾಹ ಉಂಟಾಯಿತು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕೆಲಸ ಆಗಿದೆ, ನೀರು ಎಲ್ಲೂ ಹೋಗಲು ಸಾಧ್ಯವಿಲ್ಲ.ಮನಬಂದ ಕಡೆ ಕ್ವಾರಿ ಮಾಡಿದ್ದಾರೆ. ಸಿಕ್ಕಸಿಕ್ಕ ಕಡೆ ಮಣ್ಣು ಎತ್ತಿದ್ದಾರೆ.
ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅವಕಾಶವಿಲ್ಲ. ಭಕ್ಷಿ ಕೆರೆಗೆ ನಿರೀಕ್ಷೆಗೂ ಮೀರಿ ನೀರು ಬರಲು ರಾಷ್ಟ್ರೀಯ ಹೆದ್ದಾರಿಯೇ ಕಾರಣ ಎಂದು ತಿರುಗೇಟು ನೀಡಿದರು.
ಈ ಮಹಾನುಭಾವ ರಸ್ತೆ ಕೆಲಸಕ್ಕೆ ಶ್ರಮಪಟ್ಟು ನಿರ್ವಹಣೆ ಮಾಡಿದ್ದೇನೆ ಎಂದು ಪೋಸ್ ಕೊಟ್ಟರಲ್ಲಾ, ವೇಗವಾಗಿ ಕೆಲಸವಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.
ಇವರಿಗೆ ಪರಿಜ್ಞಾನ ಇದ್ದರೆ, ನೀರು ಯಾಕೆ ನುಗ್ಗಿತು ಎಂದು ತಿಳಿದುಕೊಳ್ಳಲಿ ಎಂದು ಪ್ರತಾಪ್ ಸಿಂಹ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಡ್ಯ ಸಂಸದರಿಗೂ, ಪ್ರತಾಪ್ ಸಿಂಹ್ ಅವರಿಗೂ ಕ್ರೆಡಿಟ್ ವಾರ್ ನಡೆದಿತ್ತು. ಹಣೆಬರಹ ಎಲ್ಲಿಗೆ ಬಂದಿದೆ ನೋಡಿ.ಮೊದಲು ಅದನ್ನು ಸರಿಪಡಿಸಿಕೊಳ್ಳಪ್ಪ ಎಂದು ನುಡಿದರು.
ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರ್ಕಾರ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾನು ಮತ್ತು ಸಿದ್ದರಾಮಯ್ಯ ಮೌನಕ್ಕೆ ಶರಣನಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಇಂಥ ಪ್ರಕರಣಕ್ಕೆ ನಾನು ಮೌನಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ. ಇದು ಸರ್ಕಾರದ ಜವಾಬ್ದಾರಿ ಎಂದರು.
ಪ್ರಕರಣಗಳಿಂದ ಧಾರ್ಮಿಕ ಕ್ಷೇತ್ರದ ಮೇಲೆ ಇರುವ ನಂಬಿಕೆಗೆ ಅಪಚಾರ ಆಗಬಾರದು. ಕಾನೂನು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗೊಂದಲ ಆಗದಂತೆ ಸರ್ಕಾರ ತೀರ್ಮಾನ ಮಾಡಬೇಕು ಎಂದು ಎಚ್ ಡಿ ಕೆ ಹೇಳಿದರು.
ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನು ಮಳೆ ನಿಂತ ಮೇಲೆ ಪ್ರಾರಂಭಿಸಲಾಗುವುದು ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.
ಪಿತೃಪಕ್ಷ ಹಾಗೂ ದಸರಾ ಹಬ್ಬಗಳು ಬರಲಿರುವುದರಿಂದ ನೋಡಿಕೊಂಡು ದಿನಾಂಕ ನಿಗದಿ ಮಾಡುತ್ತೇವೆ ಎಂದು ತಿಳಿಸಿದರು.
ಒಮ್ಮೆ ಪ್ರಾರಂಭ ಮಾಡಿದರೆ 120-130 ಕ್ಷೇತ್ರದಲ್ಲಿ ಮಾಡಬೇಕಿದೆ. ಸರಿಯಾದ ಸಮಯ ನೋಡಿಕೊಂಡು ಪಂಚರತ್ನ ಯಾತ್ರೆ ಪ್ರಾರಂಭಿಸಲಾಗುವುದು ಎಂದರು.
ಪ್ರವಾಸದ ವೇಳೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಗ್ರಾಮ ವಾಸ್ತವ್ಯದಲ್ಲಿ 14-15 ಕಾರ್ಯಕ್ರಮಗಳು ಇರಲಿವೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳು ರಾಮನಗರಕ್ಕೆ ಭೇಟಿ ನೀಡಿದ್ದರು. ಅವರಿಗೆ ನಿಜವಾದ ಸಮಸ್ಯೆ ಅರಿವಾಗಿದೆ.
ಎನ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ಕೊಟ್ಟರೆ ಅಲ್ಲಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಎಚ್ ಡಿ ಕೆ ಉತ್ತರಿಸಿದರು.

