ಮಂಗಳೂರಿಗೆ ಮೋದಿ: ಬಿಜೆಪಿಯಲ್ಲಿ ಗರಿಗೆದರಿದ ಉತ್ಸಾಹ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಶುಕ್ರವಾರ ಮಂಗಳೂರಿಗೆ ಆಗಮಿಸಲಿದ್ದು, ಬಿಜೆಪಿಯಲ್ಲಿ ಉತ್ಸಾಹ ಗರಿಗೆದರಿದೆ.

ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮೋದಿ ಭಾಗಿಯಾಗಿ ಮಾತನಾಡಲಿದ್ದಾರೆ.

ಇದು ಕಮಲ ಪಡೆಯಲ್ಲಿ ಉತ್ಸಾಹ ಹೆಚ್ಚಿಸಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೂಲೆ, ಹಲ್ಲೆ , ಕಾರ್ಯಕರ್ತರ ರಾಜೀನಾಮೆ ಸೇರಿದಂತೆ ಹಲವಾರು ಘಟನೆಗಳಿಂದ ಬಿಜೆಪಿಯಲ್ಲಿ ನಿರುತ್ಸಾಹ ಉಂಟಾಗಿತ್ತು.

ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಲಿದೆ ಎಂಬ ನಿರೀಕ್ಷೆ ನಾಯಕರದ್ದು.

ಮೊದಲು ಕೇರಳದ ಕೊಚ್ಚಿಗೆ ತೆರಳಲಿರುವ ಮೋದಿ ಅಲ್ಲಿ ಕೊಚ್ಚಿನ್ ಶಿಪ್‍ ಯಾರ್ಡ್ ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧವಾಹಕ ನೌಕೆಯನ್ನು ಲೋಕಾರ್ಪಣೆ ಮಾಡುವರು.

ಬಳಿಕ ನವಮಂಗಳೂರು ಬಂದರು ಪ್ರಾಕಾರ (ಎನ್‍ಎಂಪಿಎ)ದಲ್ಲಿ ಸುಮಾರು 1200 ಕೋಟಿ ರೂ. ವೆಚ್ಚದ  ಕಾಮಗಾರಿಗೆ ಶಿಲಾನ್ಯಾಸ ಮಾಡಿ, ಅನಘಾ ರಿಫೈನರಿ ಬರ್ತ್ ಸೇರಿದಂತೆ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ನೆರವೇರಿಸಲಿದ್ದಾರೆ.

ನಂತರ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಗಣೇಶ ಚತುರ್ಥಿಯ ಮೂರನೇ ದಿನವಾದ ಶುಕ್ರವಾರ ಮಂಗಳೂರಿನ ಬಹುತೇಕ ಕಡೆ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಗಣಪತಿ ನಿಮಜ್ಜನ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮಕ್ಕಳ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಮಾವೇಶಕ್ಕೆ ಯಾವುದೇ ನೆಪದಲ್ಲಿ ಅಡ್ಡಿಪಡಿಸುವ ಬಗ್ಗೆ ಜಾಲತಾಣಗಳಲ್ಲಿ ಕಂಡುಬಂದಿರುವ ಪೋಸ್ಟರ್ ಗಳನ್ನು ಪೊಲೀಸ್ ಇಲಾಖೆ ಗಂಭೀರ ಪರಿಣಿಸಿದೆ.

ಕರಾವಳಿಯ ಬಿಜೆಪಿ ನಾಯಕರ ಅಸಮಾಧಾನವನ್ನು ಸಮಾವೇಶದಲ್ಲಿ ಹೊರಹಾಕುವುದಾಗಲೀ ಅಥವಾ ಪ್ರಧಾನಿ ರಸ್ತೆ ಮಾರ್ಗದಲ್ಲಿ ಸಂಚರಿಸುವ ವೇಳೆ ಅನಪೇಕ್ಷಿತ ಘಟನೆಗಳಿಗೆ ಆಸ್ಪದ ಸಿಗದಂತೆ  ನಿಗಾ ವಹಿಸಲಾಗುತ್ತಿದೆ.

ಈಗಾಗಲೇ ಮೋದಿ ಸಮಾವೇಶ ವಿರುದ್ಧ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿರುವವರ ಪಟ್ಟಿಸಿದ್ಧವಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.