ಚಿತ್ರದುರ್ಗ: ಪೋಸ್ಕೊ ಕಾಯ್ದೆಯಡಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘ ಮಠದ ಡಾ.ಶಿವಮೂರ್ತಿ ಶರಣರನ್ನು ನ್ಯಾಯಾಲಯ ಸೆಪ್ಟೆಂಬರ್ 5 ರವರೆಗೆ ಪೋಲಿಸ್ ಕಸ್ಟಡಿಗೆ ನೀಡಿದೆ.
ಶ್ರೀಗಳನ್ನು ಚಿತ್ರದುರ್ಗದ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಈ ವೇಳೆ ಕೋರ್ಟ್ ಕಟಕಟೆಯಲ್ಲಿ ನಿಲ್ಲಲು ಶ್ರೀಗಳು ನಿರಾಕರಿಸಿದ್ದಾರೆ. ಆದರೆ ಕಟಕಟೆಯಲ್ಲಿ ನಿಲ್ಲುವಂತೆ ನ್ಯಾಯಾಧೀಶರು ಸೂಚಿಸಿದಾಗ ಶ್ರೀಗಳು ಕಣ್ಣೀರು ಹಾಕಿದರು.
ನ್ಯಾಯಾಲಯದ ಆದೇಶ ಪಾಲಿಸುವ ಅನಿವಾರ್ಯ ಎದುರಾದಾಗ ಶ್ರೀಗಳು ಕಟಕಟ್ಟೆಯಲ್ಲಿ ನಿಲ್ಲಲೇಬೇಕಾಯಿತು.
ಈ ವೇಳೆ ಪೋಲಿಸರ ಕೋರಿಕೆ ಮೇರೆಗೆ ನ್ಯಾಯಾಲಯ ಶ್ರೀಗಳನ್ನು 4 ದಿನ ಪೊಲೀಸ್ ಕಸ್ಟಡಿಗೆ ನೀಡಿತು.
ಶ್ರೀಗಳಿಗೆ ಅನಾರೋಗ್ಯ ಉಂಟಾದರೆ ಚಿಕಿತ್ಸೆ ಕೊಡಿಸಿ. ಒಂದು ವೇಳೆ ಅವರ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ತೀರ್ಮಾನ ಕೈಗೊಳ್ಳಬೇಕಾದರೆ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಜೈಲಿನ ಅಧೀಕ್ಷಕರಿಗೆ ನ್ಯಾಯಾಧೀಶರು ಸೂಚನೆ ನೀಡಿದರು
ನ್ಯಾಯಾಧೀಶರ ಮಾತು ಕೇಳಿದೊಡನೆ ಶ್ರೀಗಳು ಆಘಾತಕ್ಕೊಳಗಾಗಿ ಅಲ್ಲೆ ಕುಸಿದು ಬಿದ್ದರು.
ಸುಧಾರಿಸಿಕೊಂಡ ನಂತರ ಶ್ರೀಗಳನ್ನು ವ್ಹೀಲ್ ಚೇರ್ ನಲ್ಲಿ ಪೋಲಿಸ್ ವ್ಯಾನ್ ಗೆ ಕರೆತಂದು ಮಲಗಿಸಲಾಯಿತು.
ಅನಾರೋಗ್ಯದ ಕಾರಣ ನೀಡಿ ಶ್ರೀಗಳನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲು ನಿರ್ಧರಿಸಲಾಗಿತ್ತು.
ಆದರೆ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಶ್ರೀಗಳು ಮಾಡಿದ ಎಲ್ಲಾ ಪ್ರಯತ್ನಗಳಿಗೆ ಕೋರ್ಟ್ ಬ್ರೇಕ್ ಹಾಕಿತು.
ಶ್ರೀಗಳನ್ನು ಮತ್ತೆ ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ತರುವಾಯ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಪೋಲಿಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸ್ವಾಮೀಜಿ ಆರೋಗ್ಯ ತಪಾಸಣೆ ನಡೆಯುತ್ತಿದ್ದ ವೇಳೆ ಸ್ವಾಮೀಜಿಯವರ ಶಿಷ್ಯ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ.ಕೂಡಲೇ ಅದನ್ನು ಪೋಲಿಸರು ತಡೆದರು.

