ಕಾಂಗ್ರೆಸ್ ಪಕ್ಷದ ಭಾರತ ಐಕ್ಯತೆ ಯಾತ್ರೆ ಪ್ರಾರಂಭ

ನವದೆಹಲಿ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ ಐಕ್ಯತೆ ಯಾತ್ರೆ ಬುಧ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ. 
ಬೆಳಗ್ಗೆ ರಾಹುಲ್‍ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬೂರಿನಲ್ಲಿ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಪುಣ್ಯ ಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕಾಂಗ್ರೆಸ್ ನಾಯಕರು ರಾಹುಲ್‍ಗಾಂಧಿ ಅವರ ಜತೆ ಇದ್ದರು.
ಅಲ್ಲಿಂದ ಕನ್ಯಾಕುಮಾರಿಗೆ ತೆರಳಿದ ರಾಹುಲ್‍ಗಾಂಧಿ ಪಾದಯಾತ್ರೆ ಆರಂಭಿಸಿದರು. 
ಸುಮಾರು 150 ದಿನ 3570 ಕಿ.ಮೀ. ಪಾದಯಾತ್ರೆ ಸಾಗಲಿದ್ದು, 12 ಜಿಲ್ಲೆಗಳನ್ನು ಹಾದು ಹೋಗಲಿದೆ. 
ಭಾರತದ ತುತ್ತ ತುದಿ ಕಾಶ್ಮೀರಕ್ಕೆ ತಲುಪುವ ಈ ಪಾದಯಾತ್ರೆ ಕಾಂಗ್ರೆಸ್‍ನ ತಳಮಟ್ಟದ ಕಾರ್ಯಕರ್ತರನ್ನು ತಲುಪಲಿದೆ ಎಂದು ಭಾವಿಸಲಾಗಿದೆ.

ದೇಶವನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಅಗತ್ಯ ವಸ್ತುಗಳ ಮೇಲಿನ ಜಿಎಸ್‍ಟಿ ಏರಿಕೆ, ಸರ್ಕಾರಿ ಆಸ್ತಿಗಳ ಪರಭಾರೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ರಾಹುಲ್‍ಗಾಂಧಿ ತಮ್ಮ ಯಾತ್ರೆ ಉದ್ಧಕ್ಕೂ ಪ್ರಸ್ತಾಪಿಸಲಿದ್ದಾರೆ.