ಕುಡಿದು ಬಸ್ ಹತ್ತಿದ ಪ್ರಯಾಣಿಕನ ಒದ್ದು ಹೊರಹಾಕಿದ ಕಂಡಕ್ಟರ್ !

 ಬೆಂಗಳೂರು: ಕುಡಿದು ಬಸ್ ಹತ್ತಿದ್ದ ವ್ಯಕ್ತಿಯ ಕಪಾಳಕ್ಕೆ ಕೆಎಸ್ ಆರ್ ಟಿಸಿ ಕಂಡಕ್ಟರ್ ಹೊಡೆದು, ಕಲಿನಿಂದ ಒದ್ದು ಹೊರದಬ್ಬಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
ಪುತ್ತೂರು ವಿಭಾಗಕ್ಕೆ ಸೇರಿದ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ದರ್ಪ ತೋರಿಸಿದ್ದಾರೆ. 
ಕಂಡಕ್ಟರ್ ನ ಈ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಬಸ್ ಹತ್ತಿದ್ದಾನೆ. ಆಗ ಕಂಡಕ್ಟರ್ ಆತನನ್ನು ತಡೆದು ವಾಗ್ವಾದ ನಡೆಸಿದ್ದಾನೆ. 
ಅಲ್ಲದೇ ಬಸ್ಸಿನಿಂದ ಕಳಗೆ ಇಳಿಯುವಂತೆ ಹೇಳಿದ್ದಾನೆ. ಆಗ ಬಸ್ಸಿನಿಂದ ಪ್ರಯಾಣಿಕ ಕೆಳಗೆ ಇಳಿಯಲು ನಿರಾಕರಿಸಿದಾಗ ಕಂಡಕ್ಟರ್ ಕಾಲಿನಿಂದ ಒದ್ದಿದ್ದಾನೆ. ಆತ ನೆಲಕ್ಕೆ ಬೀಳುತ್ತಿದ್ದಂತೆಯೇ ಬಸ್ ಮುಂದೆ ಹೋಗಿದೆ.
ಈ ಘಟನೆಯ ಬಗ್ಗೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಂತಹ ವರ್ತನೆಯನ್ನ ಸಂಸ್ಥೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ.
ಕೂಡಲೇ ಕಂಡಕ್ಟರ್ ನನ್ನು ಅಮಾನತು ಮಾಡುತ್ತೇವೆ. ಈ ಸಂಬಂಧ ತನಿಖೆ ನಡೆಸುವಂತೆ ಸೂಚನೆ ನೀಡುತ್ತೇವೆ. ಸಾರ್ವಜನಿಕರ ಜೊತೆ ಯಾರೇ ಈ ರೀತಿ ವರ್ತನೆ ಮಾಡಿದರೂ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.