ಕತ್ತಿ ನಿಧನ: ಗಜಪಡೆಯ ಎರಡನೇ ತಂಡಕ್ಕೆ ಸರಳ ಸ್ವಾಗತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡಕ್ಕೆ ಅರಮನೆ ಆವರಣದಲ್ಲಿ ಸರಳ ಸ್ವಾಗತ ದೊರೆಯಿತು.
ಅರಣ್ಯ ಸಚಿವ ಉಮೇಶ್ ಕತ್ತಿ ಅವರ ನಿಧನದಿಂದಾಗಿ ಸ್ವಾಗತ ಕಾರ್ಯಕ್ರಮ ರದ್ದುಪಡಿಸಿ ಸರಳವಾಗಿ ಗಜಪಡೆಯನ್ನು ಬರಮಾಡಿಕೊಳ್ಳಲಾಯಿತು.
ಐದೂ ಆನೆಗಳನ್ನು ಲಾರಿಗಳಲ್ಲಿ ನೇರವಾಗಿ ಅರಮನೆ ಆವರಣಕ್ಕೆ ಕರೆತರಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗಳು ಕಬ್ಬು, ಬೆಲ್ಲ ತಿನ್ನಿಸಿ ಬರಮಾಡಿಕೊಂಡರು.
ಬಂಡೀಪುರ ಅರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಿಂದ ಅತಿಕಿರಿಯ ಆನೆ ಪಾರ್ಥಸಾರಥಿ(18) ಮಧ್ಯಾಹ್ನ ಆಗಮಿಸಿದರೆ  ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದುಬಾರೆ ಆನೆ ಶಿಬಿರದಿಂದ ಗೋಪಿ(41),ಶ್ರೀರಾಮ(40),ಸುಗ್ರೀವ(40),ಹಾಗೂ ವಿಜಯಾ(63) ಆಗಮಿಸಿದವು.
ಅ.7ರಂದು ಉಮೇಶ್ ಕತ್ತಿ ಅವರು ವೀರನಹೊಸಳ್ಳಿ ಬಳಿ ಪೂಜೆ ಸಲ್ಲಿಸಿ ದಸರಾ ಪಯಣಕ್ಕೆ ಮುನ್ನುಡಿ ಬರೆದಿದ್ದರು ಎಂದು ಈ ವೇಳೆ ಡಿಸಿಎಫ್ ಡಾ.ವಿ.ಕರಿಕಾಳನ್ ಸ್ಮರಿಸಿದರು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡದ 9ಆನೆಗಳು ತಾಲೀಮಿನಲ್ಲಿ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ
ಎರಡನೇ ತಂಡದಲ್ಲಿನ ಐದು ಆನೆಗಳಲ್ಲಿ ಶ್ರೀರಾಮ, ಸುಗ್ರೀವ, ಪಾರ್ಥಸಾರಥಿಗೆ ಇದು ಮೊದಲ ದಸರಾ, ಅಲ್ಲದೇ ಮೊದಲ ತಂಡದಲ್ಲಿ ಬಂದಿರುವ ಬಳ್ಳೆ ಆನೆ ಶಿಬಿರದ ಮಹೇಂದ್ರನಿಗೂ (39) ಇದು ಮೊದಲ ದಸರಾ.
ಸೆ.9 ಅಥವಾ10ರಂದು ಗಜಪಡೆಯ ಎರಡನೇ ತಂಡದ ಆನೆಗಳು ಸೇರಿದಂತೆ ಮೊದಲ ತಂಡದ ಆನೆಗಳಿಗೂ ಕೂಡ ತೂಕ ಪರೀಕ್ಷೆ ನಡೆಯಲಿದೆ. 
ವಿಶೇಷ ಆಹಾರ ನೀಡುವುದರ ಜೊತೆಗೆ ತಾಲೀಮನ್ನು ನಡೆಸುತ್ತಿರುವುದರಿಂದ ತೂಕ ಪರೀಕ್ಷೆಯು ಆನೆಗಳ ಆರೋಗ್ಯದ ಮೇಲೆ ನಿಗಾ ಇರಿಸಲು ಸಹಾಯವಾಗಲಿದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದರು.
ಮರದ ಅಂಬಾರಿ ತಾಲೀಮನ್ನೂ ಗೋಪಾಲಸ್ವಾಮಿ, ಧನಂಜಯನಿಗೂ ನೀಡಲಾಗುವುದು ಎಂದು ಹೇಳಿದರು.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಅಶ್ವಾರೋಹಿ ದಳದ ಕುದುರೆಗಳು ಬೆದರದಂತೆ ನೋಡಿಕೊಳ್ಳುವ ಉದ್ದೇಶದಿಂದ ಕುಶಾಲತೋಪು ಸಿಡಿಸುವ ತಾಲೀಮು ಸೆ.12ರಂದು ನಡೆಯಲಿದೆ.
ಆನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಶಬ್ದ ಕೇಳಿಸುವ ಚಟುವಟಿಕೆ ಇದಾಗಿದ್ದು ಜಂಬೂ ಸವಾರಿಗೂ ಮುನ್ನ ಮೂರು ಬಾರಿ ಅಭ್ಯಾಸ ಮಾಡಿಸಲಾಗುವುದು ಎಂದು ಕರಿಕಾಳನ್ ಸ್ಪಷ್ಟಪಡಿಸಿದರು.