ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಎರಡನೇ ತಂಡದ ಗಜಪಡೆಗೆ ತೂಕ ಹಾಕುವ ಪ್ರಕ್ರಿಯೆ ನಡೆಯಿತು.
ಇದರೊಂದಿಗೆ ಮೊದಲ ತಂಡದ ಆನೆಗಳಿಗೂ ತೂಕ ಹಾಕಲಾಯಿತು.
ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ವೇ ಬ್ರಿಡ್ಜ್ ನಲ್ಲಿ ನಡೆಯಿತು. ಈ ಬಾರಿಯೂ ಅರ್ಜನನೇ ಬಲಶಾಲಿ ಎಂಬುದು ನಿರೂಪವಾಯಿತು.
ಅರ್ಜುನನೇ ಬರೋಬ್ಬರಿ 5885 ಕೆ.ಜಿ ತೂಕ ಹೊಂದಿದ್ದಾನೆ. ಕ್ಯಾಪ್ಟನ್ ಅಭಿಮನ್ಯು 5000, ಚೈತ್ರ 3235, ಭೀಮ 4345, ಗೋಪಾಲಸ್ವಾಮಿ 5460, ಮಹೇಂದ್ರ 4450, ವಿಜಯ 2760, ಗೋಪಿ 4670, ಧನಂಜಯ 4890, ಶ್ರೀರಾಮ 4475, ಲಕ್ಷ್ಮೀ 3150, ಸುಗ್ರೀವ 4785, ಕಾವೇರಿ 3245 ಕೆಜಿ ತೂಕ ಹೊಂದಿದ್ದಾರೆ.
ಈ ಗಜಪಡೆಯಲ್ಲಿ ಕಿರಿಯವನಾದ ಪಾರ್ಥಸಾರಥಿ 3445 ಕೆಜಿ ತೂಕ ಹೊಂದಿದ್ದಾನೆ.
ಈ ವೇಳೆ ಡಿಸಿಎಫ್ ಡಾ.ವಿ. ಕರಿಕಾಳನ್ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ, ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ ಎಂದು ಹೇಳಿದರು.
ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಸಾವಿರ ಕೆಜಿ ವರೆಗೆ ತೂಕವಿದ್ದು, ಕಿರಿಯ ಪಾರ್ಥಸಾರಥಿ ಆನೆ 3445 ತೂಕ ಹೊಂದಿದೆ ಎಂದು ತಿಳಿಸಿದರು.
ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಳವಾಗಿದೆ ನಮ್ಮ ತಾಲೀಮುಗಳಿಗೂ ಕೂಡ ಅವು ಚೆನ್ನಾಗಿ ಸಹಕರಿಸುತ್ತಿವೆ ಎಂದು ತಿಳಿಸಿದರು.
ಶ್ರೀರಾಮ ಮತ್ತು ಪಾರ್ಥಸಾರಥಿ ಮೊದಲನೇ ತಂಡದ ಆನೆಗಳ ಜೊತೆ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

