ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧದ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಲೂಟಿ ರವಿ ಎನ್ನುವುದಾದರೆ ನಾನು ಸಿದ್ದರಾಮಯ್ಯನವರನ್ನು ಪೆದ್ದ, ಇಲ್ಲವೇ ಕಚ್ಚೆ ಹರುಕ ಅನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಚ್ಚೆ ಹರಕು ಎನ್ನುವುದನ್ನು ನಾನು ಅಥವಾ ಬಿಜೆಪಿ ಆರೋಪಿಸುತ್ತಿಲ್ಲ. ಇದು ನನ್ನ ಹೇಳಿಕೆಯೂ ಅಲ್ಲ. ಹೆಚ್ಚಿನ ವಿಷಯ ಬೇಕು ಎಂದರೆ ಒಂದು ಕಾಲದ ಅವರ ಒಡನಾಡಿ ಎಚ್.ವಿಶ್ವನಾಥ್ ಅವರನ್ನು ಕೇಳಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಅವರ ರಕ್ತ ಒಂದೇ. ಹಾಗಾಗಿ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಸೂಕ್ತ ಕಾಲ ಬಂದಾಗ ಇದನ್ನು ಅವರೇ ಹೇಳುತ್ತಾರೆ ಎಂದರು.
ಪ್ರಾಸಬದ್ಧವಾಗಿ ನನ್ನ ಹೆಸರನ್ನು ಲೂಟಿ ಎನ್ನುವುದಾದರೆ ಸಿದ್ದುವನ್ನು ನಾನು ಪೆದ್ದ ಎಂದು ಕರೆಯಬಹುದು. ಆದರೆ, ಅದು ನನ್ನ ಸಂಸ್ಕೃತಿ ಅಲ್ಲ ಎಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಿರುವವರು ಬೇರೊಬ್ಬರ ಮೇಲೆ ಆರೋಪ ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕೆಂದು ಸವಾಲು ಹಾಕಿದರು.
ಕೆಂಪಣ್ಣ ಆಯೋಗವನ್ನು ರಚನೆ ಮಾಡಿದ್ದು ಟಿಎ-ಡಿಎ ತೆಗೆದುಕೊಳ್ಳಲು ಅಲ್ಲ. ಸತ್ಯಾಸತ್ಯತೆ ಹೊರತರಬೇಕೆಂಬ ಕಾರಣಕ್ಕಾಗಿ ರಚಿಸಲಾಗಿತ್ತು.
ಆದರೆ, ಆಯೋಗದ ವರದಿಯನ್ನು ಸದನದಲ್ಲಿ ಮಂಡನೆಯನ್ನೇ ಮಾಡಲಿಲ್ಲ ಎಂದು ಸಿ.ಟಿ.ರವಿ ಟೀಕಿಸಿದರು.
ನನ್ನನ್ನು ಲೂಟಿ ರವಿ ಎನ್ನುತ್ತಾರಲ್ಲ. ಇವರು ಸತ್ಯ ಹರಿಶ್ಚಂದ್ರನ ಮಕ್ಕಳಾ? ನಾನು ಏನು ಹೇಳಬೇಕೋ ಅದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ. ನನಗೆ ಕೇಳಿದಂತೆ ಇತರರಿಗೂ ಇದೇ ಪ್ರಶ್ನೆ ಕೇಳಿ ಎಂದು ತಿಳಿಸಿದರು.
ಸೆಂಟ್ ಹೊಡೆದುಕೊಂಡ ತಕ್ಷಣ ದುರ್ವಾಸನೆ ಮುಚ್ಚಿಹಾಕಲು ಸಾಧ್ಯವಿಲ್ಲ. ನಾನು ಹೇಳಿದ ವಿಷಯವನ್ನು ಸಾರ್ವಜನಿಕ ಚರ್ಚೆಗೆ ಬಿಡುತ್ತೇನೆ. ಅವರು ಏನು ಪ್ರತಿಕ್ರಿಯೆ ಕೊಡುತ್ತಾರೋ ನೋಡೋಣ ಎಂದರು ರವಿ.

