ಬೆಂಗಳೂರು: ಸದನದಲ್ಲಿ ಪ್ರತಿಪಕ್ಷಗಳು ಎತ್ತುವ ಪ್ರತಿ ವಿಷಯಕ್ಕೂ ಸಮರ್ಪಕ ಉತ್ತರ ನೀಡುವ ಮೂಲಕ ಪ್ರತಿ ದಾಳಿ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರು, ಶಾಸಕರಿಗೆ ಸೂಚಿಸಿದ್ದಾರೆ.
ಯಾವುದೇ ಹಗರಣ, ಪ್ರಕರಣ ಸೇರಿದಂತೆ ಏನೇ ವಿಷಯಗಳನ್ನು ಪ್ರಸ್ತಾಪಿಸಿದರೂ ಅದಕ್ಕೆ ದಾಖಲೆಗಳ ಮೂಲಕ ತಕ್ಕ ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕೆಂದು ಸಿಎಂ ಸೂಚಿಸಿದ್ದಾರೆ.
ಪಿಎಸ್‍ಐ ನೇಮಕಾತಿ ಅಕ್ರಮ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಇದಕ್ಕೆ ಸಂಬಂಧಪಟ್ಟ ಸಚಿವರು ಸಮರ್ಪಕ ಉತ್ತರ ಕೊಟ್ಟು ಕಾಂಗ್ರೆಸ್ ಶಾಸಕರ ಬಾಯಿಮುಚ್ಚಿಸುವಂತೆ ಸಲಹೆ ಮಾಡಿದ್ದಾರೆ.
ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಕಂಡು ಬಂದಿದ್ದರಿಂದ 545 ಪಿಎಸ್‍ಐ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ.
ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂಬುದನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕೆಂದು ಸಿಎಂ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಸದನದಲ್ಲಿ ಸಚಿವರು ಮತ್ತು ಶಾಸಕರು ಮೌನಕ್ಕೆ ಶರಣಾಗಬಾರದು. ಪ್ರತಿಪಕ್ಷಗಳ ಪ್ರತಿ ಪ್ರಶ್ನೆಗೂ ಉತ್ತರಗಳನ್ನು ಕೊಡಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಬೊಮ್ಮಾಯಿ ಸೂಚಿಸಿದ್ದಾರೆ.

