ಕಲಾಪದಲ್ಲಿ ಸರ್ಕಾರದ ಅತಿದೊಡ್ಡ ಹಗರಣ ಬಹಿರಂಗಪಡಿಸುವೆ -ಎಚ್ ಡಿ ಕೆ

ಬೆಂಗಳೂರು: ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು ಪ್ರಸಕ್ತ ವಿಧಾನಸಭೆ ಕಲಾಪದಲ್ಲಿ ಬಹಿರಂಗಪಡಿಸುವುದಾಗಿ   ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ ಎಂದು ಪದೇ ಪದೇ ಕೆಣಕಿದ್ದಾರೆ ಹಾಗಾಗಿ ದಾಖಲೆ ಕೊಡುತ್ತೇವೆ ಎಂದು ತಿಳಿಸಿದರು.
ಸಾವಿರಾರು ಕೋಟಿ ಬೆಲೆ ಬಾಳುವ  ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ  ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು‌‌ ಕಾಂಗ್ರೆಸ್ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು. 
ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ನಾನು ಈ ದಾಖಲೆಗಾಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ.
ಇದನ್ನೇ ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯದಲ್ಲಿ ಇತ್ತಿಚೆಗೆ ಬೆಂಗಳೂರು ನಗರ ಸೇರಿ 22 ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದೆ. ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ ಎಂದು‌ ಹೇಳಿದರು.
ಬೆಳೆ ಹಾನಿ, ಮನೆ ಕುಸಿತವೂ ಆಗಿದೆ. ಇದರ ಬಗ್ಗೆ ಸದನದಲ್ಲಿ ವಿಶೇಷವಾಗಿ ಚರ್ಚೆ ಮಾಡಲು ಸಭೆಯಲ್ಲಿ ನಿರ್ಧಾರ‌ ಮಾಡಿದ್ದೇವೆ ಎಂದು ಹೇಳಿದರು.
ಉತ್ತಮ ರೀತಿಯ ಕಲಾಪಕ್ಕೆ ಅವಕಾಶ ಯಾವ ರೀತಿ ಇರುತ್ತದೆ ಎಂಬುದನ್ನು ನೋಡಬೇಕು. ಸುಮ್ಮನೆ ವಿಚಾರ ಇಲ್ಲದೆ, ದಾಖಲೆ ಇಲ್ಲದೇ ಮಾತಾಡುವುದರಿಂದ ಸದನದ ಕಲಾಪಕ್ಕೆ ಅಡ್ಡಿ ಆಗಲಿದೆ ಎಂದು ಎಚ್ ಡಿ ಕೆ ಹೇಳಿದರು.
ಯಾವುದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಯಾರೂ ಹೋಗುತ್ತಿಲ್ಲ. ಸಾರ್ವಜನಿಕ ಆಸ್ತಿಯನ್ನು ಹಣಕೋಸ್ಕರ ಮಾರಾಟಕ್ಕೆ ಇಡುತ್ತಿದ್ದಾರೆ. ಇಂತಹ ದಾಖಲೆ ಸದನದಲ್ಲಿ‌ ಇಡಬೇಕಿದೆ. 
ನಾಡಿನ‌ ಜನತೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಒಂದು ಸಂದೇಶ ಹೋಗಬೇಕಿದೆ ಎಂದು ತಿಳಿಸಿದರ
ತೃತೀಯ ರಂಗ ಅನ್ನೋದು ಪ್ರಶ್ನೆ ಅಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್  ಅವರು ದೇಶದ ಸಮಸ್ಯೆ ಪರಿಹಾರಕ್ಕೆ ಅವರದ್ದೇ ಆದ ಒಂದು ಕಲ್ಪನೆ ಇಟ್ಟುಕೊಂಡಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.
ರೈತರ ವಿಚಾರದಲ್ಲಿ ಯಾವ ರೀತಿ ಸಹಾಯ ಆಗಬೇಕು. ರಾಷ್ಟ್ರಮಟ್ಟದಲ್ಲಿ ಯಾವ ರೀತಿ ಹೋಗಬೇಕು ಎಂಬ ಕಲ್ಪನೆಯನ್ನು ಅವರು ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ನಮ್ಮ ಸಹಾಯ ಕೋರಿದ್ದಾರೆ ಎಂದು ಹೇಳಿದರು.
ನಾವು ಅವರ ಜೊತೆ ಕೈ ಜೋಡಿಸುವ ನಿಟ್ಟಿನಲ್ಲಿ ಯೋಚಿಸಲಾಗಿದೆ ಎಂದು ಎಚ್ ಡಿ ಕೆ ತಿಳಿಸಿದರು.