ಸಿದ್ದರಾಮಯ್ಯ ಅವಧಿಯ ಹಗರಣಗಳ ತನಿಖೆ -ಕಟೀಲ್

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆ ನಡೆಸುತ್ತೇವೆ ಎಂದುಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರನ್ನು ಒಳಗೆ ಕೂರಿಸುತ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಕುರಿತು ತನಿಖೆ ನಡೆಸಲಾಗುವುದು ಎಂದರು.
ಅರ್ಕಾವತಿ ರಿಡೊ, ಹಾಸ್ಟೇಲ್ ಗಳಲ್ಲಿನ ಹಾಸಿಗೆ ಹಗರಣ, ಇಂಧನ ಇಲಾಖೆ ಹಗರಣ ಮುಂತಾದ ಹಗರಣ ಮುಚ್ಚಿಡುವ ಕೆಲಸವನ್ನು ಸಿದ್ಧರಾಮಯ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಎಲ್ಲಾ ಹಗರಣ ಹೊರ ತೆಗೆಯುವ ಕೆಲಸ ನಾವು ಮಾಡುತ್ತೇವೆ.  ವಿಪಕ್ಷದಲ್ಲಿದ್ದಾಗ ಹಗರಣದ ವಿರುದ್ಧ ನಾವು ಧ್ವನಿ ಎತ್ತಿದ್ದೆವು. ಆದರೆ ಸಿದ್ದರಾಮಯ್ಯ ತನಿಖೆ ಮಾಡಿಸದೇ ಎಲ್ಲವನ್ನೂ ಮುಚ್ಚಿಟ್ಟರು ಎಂದು ಆರೋಪಿಸಿದರು. 
ನಮ್ಮ ಸರ್ಕಾರದ ಅವಧಿಯಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ಹೊರಬಂತು. ಕೂಡಲೇ ನಾವು ತನಿಖೆಗೆ ಆದೇಶಿಸಿದೆವು. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.
ಸಮಾಜವಾದಿ ಎನ್ನುವ ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಏಕೆ ನೈತಿಕತೆ ಪ್ರದರ್ಶನ ಮಾಡಲಿಲ್ಲ. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಇವರು ಏನು ಮಾಡಿದರು ಎಂದು ಕಟೀಲ್ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ  ಸೋನಿಯಾಗಾಂಧಿ, ರಾಹುಲ್ ಗಾಂಧಿ‌ ಏಕೆ ಬೇಲ್‌ ಮೇಲೆ ಇದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಏಕೆ ಬೇಲ್ ಮೇಲೆ ಇದ್ದಾರೆಂದು ಪ್ರಶ್ನಿಸಿದರು.
40% ಕಮೀಷನ್ ಬಗ್ಗೆ ಸಿದ್ದರಾಮಯ್ಯ ಬಳಿ ದಾಖಲಾತಿಗಳಿದ್ದರೆ ಬಿಡುಗಡೆ ಮಾಡಲಿ. ಆದರೆ  ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.