ಪೊಲೀಸ್ ಕಾನ್ಸ್ಟೇಬಲ್ ಆಯ್ಕೆ ಪ್ರಕ್ರಿಯೆ ಪಾರದರ್ಶಕ: ತೃತೀಯ ಲಿಂಗಿಗಳಿಗೂ ಆದ್ಯತೆ -ಆರಗ

ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪಡೆಗಳ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು ಅತ್ಯಂತ ಪಾರದರ್ಶಕವಾಗಿ ಪ್ರಕ್ರಿಯೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಇದೇ ಪ್ರಥಮ ಬಾರಿಗೆ, ಪುರುಷ ತೃತೀಯ ಲಿಂಗಿ ಸಮುದಾಯದ 79 ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟು 3484 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅಕ್ಟೋಬರ್ 31ರಂದು  ಅರ್ಜಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371J ಮೀಸಲಾತಿ ಯಂತೆ ಒಟ್ಟು 420 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ 11 ಪುರುಷ ತೃತೀಯ ಲಿಂಗಿಳಿಗೆ ಮೀಸಲಾಗಿದೆ.

ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 3064 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 68 ಹುದ್ದೆಗಳು ತೃತೀಯ ಲಿಂಗಿ ಪುರುಷರಿಗೆ ಮೀಸಲಾತಿ ನೀಡಲಾಗುತ್ತದೆ.

ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳಲ್ಲಿ  ಸುಮಾರು 16000 ಹುದ್ದೆಗಳು ಭರ್ತಿಯಾಗಬೇಕಿದೆ.

ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳು, ಯಾವುದೇ ಅಕ್ರಮಗಳ ಅಥವಾ ವಾಮಮಾರ್ಗದ ಮೂಲಕ ಹುದ್ದೆಗಳನ್ನು ಪಡೆಯಲು ಯತ್ನಿಸಿದರೆ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.