ಮಸೂದೆ ಮಂಡನೆ ವೇಳೆ ಬಿಲ್ ಪ್ರತಿ ಹರಿದ ಕಾಂಗ್ರೆಸ್ ನಡೆಗೆ ಈಶು ಖಂಡನೆ

ಮೈಸೂರು: ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆ ವೇಳೆ ಬಿಲ್ ನ ಪ್ರತಿ ಹರಿದು ಹಾಕಿದ ಕಾಂಗ್ರೆಸ್ ಕ್ರಮ ಸರಿಯಲ್ಲ‌ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದರು. 
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯನ್ನು ಓಲೈಕೆ ಮಾಡುವ ಸಲುವಾಗಿ ಕಾಂಗ್ರೆಸ್ ಸದಸ್ಯರು ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಜಾರಿ ನಿರ್ದೇಶನಾಲಯ ನೋಟಿಸ್ ನೀಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಸರಿಯಲ್ಲ ಎಂದರು.
ಡಿ. ಕೆ. ಶಿವಕುಮಾರ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಬೇಲ್ ಮೇಲೆ ಹೊರಗಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಈ ರೀತಿಯ ಹೇಳಿಕೆ ನೀಡಬಾರದು ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅಖಂಡ ಭಾರತವನ್ನು ಒಡೆದು ಹಾಕಿದ್ದೇ ಕಾಂಗ್ರೆಸ್, ಈಗ ಅದನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆರ್ಥಿಕವಾಗಿ ಸಬಲರಾಗಿರುವವರಿಗೆ ಮೀಸಲಾತಿ ನೀಡಬಾರದು. ದಲಿತರಿಗೆ ಕಲ್ಪಿಸಿರುವ ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುತ್ತಿದ್ದಾರೆ. 
ದಲಿತ ಸಮುದಾಯದಲ್ಲಿ ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಬೇಕು. ಸ್ವಾಭಿಮಾನದ ಬದುಕು ಸಿಗುವವರೆಗೂ ದಲಿತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು.
ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ ಖರ್ಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೀಸಲಾತಿ ನೀಡುವಾಗ ಕಡುಬಡವರಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ‌‌ನೀಡಿದೆ. ಪ್ರಕರಣದಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವ ಸ್ಥಾನ ನೀಡುವ ವಿಶ್ವಾಸವಿತ್ತು. ನನಗೆ ಕ್ಲೀನ್ ಚಿಟ್ ಸಿಕ್ಕನಂತರ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಮತ್ತೆ ಸಚಿವ ಸ್ಥಾನ ನೀಡದಿರುವುದರಿಂದ ಸಹಜವಾಗಿಯೇ ಅಸಮಾಧಾನವಾಗಿದೆ ಎಂದರು.
ಇಂಧನ ಇಲಾಖೆಯ ಅವ್ಯವಹಾರ ಕುರಿತು ಹಳೆಯ ಕಡತಗಳನ್ನು ಪರಿಶೀಲನೆ ಮಾಡುತ್ತಿರುವುದಕ್ಕೆ ಡಿಕೆಶಿವಕುಮಾರ್   ಆಕ್ಷೇಪ ವಿಚಾರಕ್ಕೆ ಪ್ರತಿಕ್ರಿಯಿಸಿ ಅವು ಸಾರ್ವಜನಿಕ ದಾಖಲೆಗಳು ಯಾರು ಬೇಕಾದರೂ ಪಡೆಯಬಹುದು ಎಂದು ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ಮತ್ತಿತರರು ಉಪಸ್ಥಿತರಿದ್ದರು.