ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ವೈಯಕ್ತಿಕ ಸ್ವತಂತ್ರ ಹರಣವಾಗಲಿದ್ದು, ಇಂತಹ ವಿವಾದಾತ್ಮಕ ಕಾಯ್ದೆಗಳನ್ನು ತಂದು ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಇದರ ಬಗ್ಗೆ ಶೀಘ್ರ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬೇರೆ ಧರ್ಮ ಸೇರಲು ಅರ್ಜಿ ಹಾಕಿ ವೈಯಕ್ತಿಕ ಮಾಹಿತಿ ನೀಡಬೇಕು. ಆ ಮಾಹಿತಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುತ್ತಾರೆ. ಇದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಿಲ್ಲವೇ ಕಾನೂನು ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಇದು ಗೊತ್ತಾಗುವುದಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಜರಾತ್ ಮಾದರಿ ಎಂದು ಹೇಳುತ್ತಾರೆ. ಗುಜರಾತ್‍ನಲ್ಲಿ ಕಾಯ್ದೆಯ ಸೆಕ್ಷನ್ 3ಕ್ಕೆ ತಡೆಯಾಜ್ಞೆ ಇದೆ. ಇದರಿಂದ ಅಂತರ್ಜಾತಿ ವಿವಾಹಕ್ಕೂ ಹಿನ್ನಡೆಯಾಗಲಿದೆ.
ಮತಾಂತರವಾಗುವ ವ್ಯಕ್ತಿಯ ಸಂಬಂಧಿಕರು ದೂರು ನೀಡಿದರೆ ಕೇಸ್ ದಾಖಲಿಸುತ್ತಾರಂತೆ ಹೀಗಾಗಿ ಮತಾಂತರ ನಿಷೇಧ ವಿಧೇಯ
ಸ್ವಾತಂತ್ರ್ಯ ಕಸಿಯುವ ವಿಧೇಯಕವಾಗಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿವಾದಾತ್ಮಕ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ. ಅವರವರ ಧರ್ಮ ಆಚರಣೆಯ ಹಕ್ಕು ಎಲ್ಲರಿಗೂ ಇದೆ.
ಆದರೆ ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಈ ಕಾಯ್ದೆಯಲ್ಲಿದೆ. ಆಮಿಷ, ಒತ್ತಾಯದ ಮೂಲಕ ಮತಾಂತರವಾಗುವುದನ್ನು ತಡೆಯಲು ಕಾಯ್ದೆ ತರಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

