ದಸರಾ ಮಹೋತ್ಸವದಲ್ಲಿ 124 ಕಿ.ಮೀ ದೀಪಾಲಂಕಾರ

ಮೈಸೂರು: ದಸರಾ ಮಹೋತ್ಸವದಲ್ಲಿ ಪ್ರವಾಸಿಗರನ್ನು ಸೆಳೆಯಲು ಈ ಬಾರಿ 124ಕಿ.ಮೀ ದೀಪಾಲಂಕಾರ ಮಾಡುವ ಮೂಲಕ ಮಲ್ಲಿಗೆ ನಗರಿಯನ್ನು ಝಗಮಗಿಸುವಂತೆ ಮಾಡಲಾಗುತ್ತಿದೆ.
ದಸರಾ ದೀಪಾಲಂಕಾರ ಸಿದ್ಧತೆ ಕುರಿತು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೀಪಾಲಂಕಾರದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೀಪಾಲಂಕಾರ ಸಮಿತಿ ಉಪವಿಶೇಷಾಧಿಕಾರಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾಹಿತಿ ನೀಡಿದರು.
ಕಳೆದ ವರ್ಷ 100ಕಿ.ಮೀ.ದೀಪಾಲಂಕಾರ ಮಾಡಲಾಗಿತ್ತು. ಈ ಬಾರಿ 124ಕಿ.ಮೀ ರಸ್ತೆ, ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. 
ಸೂರ್ಯಾಸ್ತದಿಂದ ರಾತ್ರಿ 10.30ರವರೆಗೆ ದೀಪಾಲಂಕಾರ ಇರಲಿದೆ, ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಿವಿಧೆಡೆ ಸಂಸತ್ ಭವನದ ಮಾದರಿ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಕೃತಿ, ಎಲ್ ಐ ಸಿ ವೃತ್ತದಲ್ಲಿ ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ಪ್ರಾಣಿ ಪಕ್ಷಿಗಳ ಮಾದರಿಗಳನ್ನು ಅಳವಡಿಸಲಾಗುತ್ತಿದೆ.  
ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಕೃತಿಗಳು, ಮೈಸೂರು ಮಹಾರಾಜರು, ಕೆಂಪುಕೋಟೆ, ಸುಭಾಷ್ ಚಂದ್ರ ಬೋಸ್ ಪ್ರತಿಕೃತಿ ಸೇರಿದಂತೆ ಇನ್ನಿತರ ಆಕೃತಿಗಳನ್ನು ತ್ರಿಡಿ ವ್ಯವಸ್ಥೆಯೊಳಗೆ ಪ್ರತಿಷ್ಠಾಪಿಸಲಾಗುತ್ತಿದೆ. 




ನವರಾತ್ರಿ ವೇಳೆ ಮೈಸೂರಿನ 96 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಈಗಾಗಲೇ 35ವೃತ್ತಗಳ ಅಲಂಕಾರಕ್ಕೆ ಪ್ರಾಯೋಜಕರು ಬಂದಿದ್ದಾರೆ. ಉಳಿದ ವೃತ್ತಗಳಿಗೆ ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ ಎಂದು ತಿಳಿಸಿದರು.
ಈ ಬಾರಿ ಜಂಬೂ ಸವಾರಿಯ ಮೆರವಣಿಗೆ ಸಂಜೆ 5.30ಕ್ಕೆ ಆರಂಭವಾಗಲಿದೆ. ದೀಪದ ಬೆಳಕಿನಲ್ಲಿ ಜಗಪಡೆ ಸಂಚರಿಸಬೇಕಿದ್ದು, ಅಂಬಾರಿ ಹೊತ್ತ ಆನೆ 16ಅಡಿ ಇರಲಿದೆ.
ಹಾಗಾಗಿ ಮೆರವಣಿಗೆ ಸಾಗುವ ಮಾರ್ಗದಲ್ಲಿ 22ಅಡಿ ಎತ್ತರದ ಕಂಬ ಬಳಸಿ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗುವುದು. 
ಜಂಬೂಸವಾರಿಯ ಮಾರ್ಗದುದ್ದಕ್ಕೂ ಅಂಬಾರಿಗೆ ದೀಪಾಲಂಕಾರದಿಂದ ತೊಂದರೆಯಾಗದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿಸಿದರು.
ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮೂರು ದಿನ ಮುನ್ನವೇ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ.
ಅರಣ್ಯ ಇಲಾಖೆಯ ಕೋರಿಕೆಯ ಮೇರೆಗೆ ಸೆ.23ರಿಂದಲೇ ಜಂಬೂಸವಾರಿ ಮಾರ್ಗದಲ್ಲಿ ದೀಪಾಲಂಕಾರವನ್ನು ಮಾಡಲಾಗುತ್ತದೆ.
ಇದರ ಬೆಳಕಿನಲ್ಲಿ ಮರದ ಅಂಬಾರಿ ಹೊತ್ತು ಆನೆ ತಾಲೀಮಿನಲ್ಲಿ ಭಾಗವಹಿಸಲಿದ್ದು, ಇದರಿಂದ ಜಂಬೂಸವಾರಿ ಮಾರ್ಗದಲ್ಲಿ ಗಜಪಡೆ ಸರಾಗವಾಗಿ ಸಾಗಲು ಸಾದ್ಯವಾಗಲಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೀಪಾಲಂಕಾರ ಮಾಡಲಾಗುತ್ತಿದ್ದು ವಿಮಾನ ನಿಲ್ದಾಣದ ದ್ವಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ನಿರ್ಮಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ ಫಲಕ ಅಳವಡಿಸುವಂತೆ ಸಲಹೆ ನೀಡಿದರು.
ಮೈಸೂರಿಗೆ ಪ್ರವೇಶಿಸುವ ಎಲ್ಲಾ ರಸ್ತೆಗಳ ಜಂಕ್ಷನ್ ನಲ್ಲಿಯೂ ದೀಪಾಲಂಕಾರ ಮಾಡಬೇಕು. ಬನ್ನೂರು, ಟಿ.ನರಸೀಪುರ, ಹೆಚ್.ಡಿ.ಕೋಟೆ ರಸ್ತೆಯ ಜಂಕ್ಷನ್ ನಲ್ಲೂ ದೀಪಾಲಂಕಾರ ಮಾಡಬೇಕು. ಸುಭಾಷ್ ಚಂದ್ರ ಬೋಸ್ ಆಕೃತಿಯನ್ನು ಪ್ರಮುಖ ರಸ್ತೆಯಲ್ಲಿ ಅಳವಡಿಸಬೇಕು. 
ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಷ ಮರ್ಧಿನಿಯ ತ್ರಿಡಿ ಆಕೃತಿ ರಚಿಸಬೇಕೆಂದು ಸೂಚಿಸಿದರು.      
 ಇದೇ ಪ್ರಥಮ ಬಾರಿಗೆ ದಸರಾ ಉದ್ಘಾಟಿಸಲು ರಾಷ್ಟ್ರಪತಿಗಳು ಬರುವುದರಿಂದ ಚಾಮುಂಡಿಬೆಟ್ಟದಲ್ಲಿ ಯಾವುದೇ ಅನಾನುಕೂಲವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರತಾಪ್ ಸಿಂಹ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.