ಧರಣಿನಿರತರ ಅಹವಾಲು ಆಲಿಸಿದ ಸಿದ್ದು

ಬೆಂಗಳೂರು: ಪಿಎಸ್‍ಐ ಹಗರಣದ ಪರಿಣಾಮಕಾರಿ ತನಿಖೆಗಾಗಿ ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸುತ್ತಿರುವ ನೂರಾರು ಯುವಜನರನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಅವರ ಅಳಲನ್ನು ಆಲಿಸಿದರು.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಬೇಕೆಂದು ಆಗ್ರಹಿಸಿ ಪಿಎಸ್‍ಐ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳ ಆಕಾಂಕ್ಷಿಗಳು ನಗರದ ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸುತ್ತಿದ್ದಾರೆ.

ಸರ್ಕಾರದ ಪರವಾಗಿ ಈವರೆಗೂ ಯಾರೂ ಅವರನ್ನು ಭೇಟಿ ಮಾಡಿ ಬೇಡಿಕೆ ಆಲಿಸುವ ಪ್ರಯತ್ನ ಮಾಡಿಲ್ಲ.

ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಫ್ರೀಡಂ ಪಾರ್ಕ್ ತೆರಳಿ ಧರಣಿ ನಿರತರನ್ನು ಭೇಟಿ ಮಾಡಿ ಧರಣಿ ನಿರತರ ಅಹವಾಲು ಆಲಿಸಿದರು.

ಪಿಎಸ್‍ಐ ಹಗರಣ ರಾಜ್ಯದ ಇತಿಹಾಸದಲ್ಲೇ ಕಂಡರಿಯದ ಹವ ಸೃಷ್ಟಿಸಿದೆ. ಎಡಿಜಿಪಿ ಹಂತದ ಅಧಿಕಾರಿ ಸೇರಿದಂತೆ ಹಲವಾರು ಮಂದಿ ಬಂಧನಕ್ಕೊಳಗಾಗಿದ್ದಾರೆ.

ಕಾಂಗ್ರೆಸ್ ಈ ಹಗರಣದ ಚರ್ಚೆಗಾಗಿ ವಿಧಾನಸಭೆ ಮತ್ತು ಪರಿಷತ್‍ನಲ್ಲಿ ಮನವಿ ಸಲ್ಲಿಸಿದೆ. ಚರ್ಚೆಗೆ ಸಭಾಧ್ಯಕ್ಷರು ಸಮ್ಮಿತಿಸದರಾದರೂ ಈವರೆಗೂ ಅವಕಾಶ ಸಿಕ್ಕಿಲ್ಲ.

ರಾಜ್ಯ ಸರ್ಕಾರದಲ್ಲಿ ಸುಮಾರು ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಪಾರದರ್ಶಕ ಪ್ರಕ್ರಿಯೆಗಳ ಮೂಲಕ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ರಾಜಸ್ಥಾನದ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.