ಬೆಂಗಳೂರು: ಕಳೆದ 2006ರಿಂದ ಇದುವರೆಗೆ ಕೇಳಿಬಂದಿರುವ ಎಲ್ಲ ಹಗರಣಗಳ ತನಿಖೆಗೆ ಒಳಪಡಿಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಸರ್ಕಾರದ ಅವಧಿಯಲ್ಲೂ ಹಗರಣಗಳಾಗಿವೆ ಎಂದು ಹೇಳುತ್ತಿದ್ದಾರೆ ಆಗ ಅವರು ಏನು ಮಾಡುತ್ತಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.
ನಮ್ಮ ಸರ್ಕಾರ ಇದ್ದಾಗ ಇವರು ಏನು ಮಾಡುತ್ತಿದ್ದರು. 2006ರಿಂದ ಆಗಿರುವ ಎಲ್ಲಾ ಹಗರಣಗಳನ್ನು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರ ಬುಟ್ಟಿಯಲ್ಲಿ ಹಾವಿಲ್ಲ. ಆದರೂ ಬುಟ್ಟಿಯಿಂದ ಬುಸ್ ಬುಸ್ ಎಂಬ ಶಬ್ದ ಬರುತ್ತಿದೆ ಎಂದು ಸಿದ್ದು ಛೇಡಿಸಿದರು.
ಸ್ವಾತಂತ್ರ ಉದ್ಯಾನವನದಲ್ಲಿ ನೂರಾರು ಮಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಪಿಎಸ್‍ಐ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.
ವಯೋಮಿತಿ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸುತ್ತೇನೆ,ಪ್ರತಿಭಟನಾನಿರತರು ಲಂಚ ಕೊಡುವುದಕ್ಕೆ ಆಗುವುದಿಲ್ಲ. ಬೆಳೆದಿರುವ ಅಕ್ಕಿ, ಕಾಳು ಕೊಡುತ್ತೇವೆ ಎಂದಿದ್ದಾರೆ.
ಸಭಾಧ್ಯಕ್ಷರ ಮೂಲಕ ಅಕ್ಕಿ, ಕಾಳು ಎಲ್ಲವನ್ನು ಸರ್ಕಾರಕ್ಕೆ ತಲುಪಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

