ನವದೆಹಲಿ: ದೇಶದ ಹಲವೆಡೆ ಪಿಎಫ್ ಐ ಸಂಘಟನೆಯ ಮುಖ್ಯಸ್ಥರ ಮನೆಗಳ ಮೇಲೆ ಎನ್‌ಐಎ ಮತ್ತು ಇಡಿ ದಾಳಿ ಮುಂದುವರಿದಿದ್ದು, ಪಿಎಫ್‌ಐ ಅಧ್ಯಕ್ಷ ಪರ್ವೇಜ್ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದೆ.
ಅಲ್ಲದೆ ಪಿಎಫ್‌ಐ ರಾಷ್ಟ್ರೀಯ ಕಾರ್ಯದರ್ಶಿ ವಿ.ಪಿ. ನಜ್ರುದ್ದೀನ್ ಅವರನ್ನೂ ವಶಕ್ಕೆ ಪಡೆದ ಎನ್ ಐಎ ತಂಡ ತನ್ನೊಂದಿಗೆ ಕರೆದೊಯ್ದಿದೆ.
ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸಿ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ.
ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇದರಲ್ಲಿ ಹತ್ತು ಸ್ಥಳಗಳು ಪಿಎಫ್ ಐ, ಎಸ್ ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ ಎರಡು ಸ್ಥಳಗಳು ಪಿಎಫ್ ಐ ಕಛೇರಿಗಳಾಗಿವೆ.
ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ದಾಳಿ ನಡೆದಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್ ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್ ನಲ್ಲಿರುವ ಪಿಎಫ್ ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್ ಮೇಲೂ ದಾಳಿ ನಡೆದಿದೆ.
ಭಯೋತ್ಪಾದಕರನ್ನು ಬೆಂಬಲಿಸಿದ ಆರೋಪದ ಮೇಲೆ ಪಿಎಫ್ ಐನವರನ್ನು ಬಂಧಿಸಲಾಗುದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರಿಗೆ ಧನಸಹಾಯ, ತರಬೇತಿ ಮತ್ತು ಜನರನ್ನು ಮೋಸಗೊಳಿಸಿ ನಿಷೇಧಿತ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡುವಲ್ಲಿ ತೊಡಗಿಸಿಕೊಂಡಿರುವವರ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಎನ್‌ಐಎ ತಿಳಿಸಿದೆ.
ಈ ದಾಳಿಯ ಕುರಿತು ಪಿಎಫ್‌ಐನ ಕೆಲವರು ಪ್ರತಿಕ್ರಿಯಿಸಿ ನಮ್ಮ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯಾಗುತ್ತಿದೆ ಇದನ್ನಹ ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

