ಕಾಂಗ್ರೆಸ್ ಕಾರ್ಯಕರ್ತರ ಬಂಧನಕ್ಕೆ ಸಿದ್ದು ಕಿಡಿ; ತಕ್ಷಣ ಬಿಡುಗಡೆಗೆ ಆಗ್ರಹ

ಬೆಂಗಳೂರು: ಕಳ್ಳರು, ದರೋಡೆಕೋರರ ರೀತಿ ನಮ್ಮ ಇಬ್ಬರು ಕಾರ್ಯಕರ್ತರನ್ನ ಮಧ್ಯರಾತ್ರಿ ಬಂಧಿಸಿರುವುದು ಸರಿಯಲ್ಲ,ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಶೇ. ೪೦ರಷ್ಟು ಕಮಿಷನ್ ಕುರಿತು ಕಾಂಗ್ರೆಸ್ ಪಕ್ಷದಿಂದ ಆಂದೋಲನ ನಡೆಯುತ್ತಿದೆ ಎಂದು ಹೇಳಿದರು.
ನಾನು,ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹರಿಪ್ರಸಾದ್ ಎಲ್ಲರೂ ಆಂದೋಲನ ಮಾಡಿದ್ದೇವೆ.‌ ಅದರ ಅಂಗವಾಗಿ ಕೆಲವರು ಪೊಸ್ಟರ್ ಅಂಟಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ಕೂಡ ಸುಳ್ಳು ಆರೋಪ ಮಾಡಿದ್ದಾರೆ.‌ ನಮಗೂ ಬೇಡವಾದವರು ಅಂತಹ ಪೊಸ್ಟರ್ ಅಂಟಿಸಿದ್ದಾರೆ ಅಲ್ವಾ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದರು.
ಮಧ್ಯರಾತ್ರಿ ಬಂಧನ ಮಾಡಿದ್ದಾರಲ್ಲಾ ಅವರೇನು ಕಳ್ಳತನ ಮಾಡಿದ್ರಾ, ಸರ್ಕಾರದ ವಿರುದ್ಧ ಹೋರಾಟ ಮಾಡಬಾರದಾ ಎಂದು ಕಿಡಿಕಾರಿದರು.
ನನಗೂ ರೀಡೂ ಸಿದ್ದರಾಮಯ್ಯ ಅಂದಿದ್ದಾರಲ್ಲಾ‌ ಅದು ಸರಿಯಾ ಎಂದು ಖಾರವಾಗಿ ಪ್ರಶ್ನಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಎಷ್ಟು ದಿನ ಆಯ್ತು, ಯಾಕೆ ತನಿಖೆ ಮಾಡಿಸಲಿಲ್ಲ, ಸರ್ಕಾರ ಏನು ಮಾಡುತ್ತಿದೆ ಎಂದು ಗುಡುಗಿದರು
ಬಿ.ಎಸ್.ಯಡಿಯೂರಪ್ಪ ಆಪ್ತನ ಮೇಲೆ ದಾಳಿಯಾಗಿತ್ತಲ್ಲಾ ಆಗ ದಾಖಲೆ ಸಿಕ್ಕಿತ್ತು, ತನಿಖೆ ಮಾಡಿಸಬೇಕಿತ್ತು ಆದರೆ ಹಾಗೆ ಮಾಡದೆ ಅದನ್ನ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮಟ್ಟ ಹಾಕುತ್ತೇವೆ ಎಂದು ಭಾಷಣ ಮಾಡುತ್ತಾರೆ.ಹಾಗೆ ಮಾಡಿದಾರಾ ಎಂದು ಸಿದ್ದು ಪ್ರಶ್ನಿಸಿದರು.
ನಾವು  ಪೋಸ್ಟರ್ ಹಿಡಿದು ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದರು.