ಬೆಂಗಳೂರು: ಭಯೋತ್ಪಾದಕ ಸಂಘಟನೆಗಳಿಗೆ ಪದೇ ಕುಮ್ಮಕ್ಕು ನೀಡುತ್ತಿರುವ ಪಿಎಫ್ಐ ಮತ್ತು ಎಸ್ ಡಿ ಪಿ ಐ ಸಂಘಟನೆಗಳಿಗೆ ಶಾಶ್ವತ ನಿಷೇಧ ಹಾಕುವ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಆರಂಭವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎರಡು ಸಂಘಟನೆಗಳು ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ಬೇರೆ ಕಡೆ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಇಟ್ಟುಕೊಂಡಿರುವುದು ಗೊತ್ತಾಗಿದೆ ಎಂದು ಹೇಳಿದರು.
ಹೀಗಾಗಿ ಇವುಗಳನ್ನು ನಿಷೇಧಿಸುವ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಪ್ರಾರಂಭವಾಗಿದೆ ಎಂದು ತಿಳಿಸಿದರು.
ತನಿಖಾ ಸಂಸ್ಥೆಗಳು ಯಾವುದೇ ಸಂಘಟನೆಗಳ ಮೇಲೆ ದಾಳಿ ಮಾಡುವಾಗ ಜಾತಿ, ಧರ್ಮ ನೋಡುವುದಿಲ್ಲ, ಮಾಹಿತಿ ಆಧರಿಸಿ ದಾಳಿ ಮಾಡುತ್ತಾರೆ ಕೆಲವರು ಇದನ್ನು ಧರ್ಮಕ್ಕೆ ಬೆರೆಸಿವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಿಎಫ್ಐ ಮತ್ತು ಎಸ್ ಡಿ ಪಿ ಐ ದೇಶದಲ್ಲಿ ಎಂತಹ ದುಷ್ಕೃತ್ಯ ನಡೆಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ.
ಇವರಿಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತದೆ. ಇವರಿಗೆ ಬೆಂಬಲ ಕೊಡುತ್ತಿರುವವರು ಯಾರು ಎಂಬುದು ಜಗತ್ತಿಗೆ ಗೊತ್ತಾಗಬೇಕು. ಇದನ್ನೆಲ್ಲಾ ಸ್ವಚ್ಛ ಮಾಡಬೇಕೆಂದರೆ ದಾಳಿ ಅನಿವಾರ್ಯ ಎಂದು ಆರಗ ಹೇಳಿದರು.
ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರಿಂದಲೇ ಇವು ಪೆಂಡಂಬೂತವಾಗಿ ಬೆಳೆದು ನಿಂತಿವೆ.
ಇಂತಹ ಸಂಘಟನೆಗಳನ್ನು ಬಗ್ಗುಬಡಿಯಬೇಕೆಂದರೆ ಜಾತಿ, ಧರ್ಮ, ರಾಜಕೀಯ ಲಾಭ, ನಷ್ಟ ನೋಡಬಾರದು. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕೆಂದು ಮನವಿ ಆರಗ ಜ್ಞಾನೇಂದ್ರ ಮನವಿ ಮಾಡಿದರು.

