ಮೈಸೂರು: ನಾಡ ಹಬ್ಬ ದಸರಾ 2022ರ ಜಂಬೂಸವಾರಿಯಲ್ಲಿ ಈ ಬಾರಿ 43 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ ಎಂದು ಸ್ತಬ್ಧ ಚಿತ್ರ ಉಪಸಮಿತಿ ಉಪಾಧ್ಯಕ್ಷ ಜೋಗಿ ಮಂಜು ತಿಳಿಸಿದರು.
ಮೈಸೂರು ಜಿಲ್ಲಾ ಪಂಚಾಯತ್ ನ ದೇವರಾಜ ಅರಸು ಸಭಾಂಗಣದಲ್ಲಿ ಬುಧವಾರ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಸರಾದ ಎಲ್ಲಾ ಕಾರ್ಯಕ್ರಮಗಳಿಗಿಂತಲೂ ಜಂಬೂಸವಾರಿಯಲ್ಲಿ ತೆರಳುವ ಸ್ತಬ್ಧಚಿತ್ರಗಳ ಮೆರವಣಿಗೆಯು ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡೆದಿದ್ದು, ಪ್ರಸ್ತುತ ವರ್ಷದ ದಸರಾ ಜಂಬೂಸವಾರಿಯಲ್ಲಿ ಜಿಲ್ಲೆಗಳ ಇತಿಹಾಸ, ಪರಂಪರೆ, ಭೌತಿಕ ವಿಷಯಗಳ ಕುರಿತು ತಲಾ ಒಂದು ಸ್ತಬ್ಧಚಿತ್ರ ನಿರ್ಮಾಣ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.
ಈ ರೀತಿ 31 ಜಿಲ್ಲೆಗಳಿಂದ 31 ಸ್ತಬ್ಧಚಿತ್ರಗಳು, ಸ್ತಬ್ಧ ಚಿತ್ರ ಉಪಸಮಿತಿಯಿಂದ ಮತ್ತು ಇತರೆ ಇಲಾಖೆಗಳಿಂದ 3, ಮೈಸೂರು ವಿಶ್ವ ವಿದ್ಯಾನಿಲಯ, ಚೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಲಿಡಕರ್, ಕೌಶಲ್ಯ ಕರ್ನಾಟಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಕಾವೇರಿ ನೀರಾವರಿ ನಿಗಮ ಮತ್ತು ವಾರ್ತಾ ಪ್ರಚಾರ ಇಲಾಖೆಯಿಂದ ತಲಾ ಒಂದೊಂದು ಒಟ್ಟು 43 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಪರಶುರಾಮಪ್ಪ, ಮಂಜುನಾಥ್, ಉಪವಿಶೇಷಾಧಿಕಾರಿ ಧನುಷ್, ಕಾರ್ಯಾಧ್ಯಕ್ಷರಾದ ಮೇಘಲಾ, ಮಾಲತಿ, ಸೌಮ್ಯ, ಸದಸ್ಯರಾದ ಮಹದೇವಸ್ವಾಮಿ ಉಪಸ್ಥಿತರಿದ್ದರು.

